ಕ್ರಿಸ್ಮಸ್ ಹಬ್ಬ ಕ್ರೈಸ್ತ ಧರ್ಮಿಯರ ಪ್ರಮುಖ ಹಬ್ಬಗಳಲ್ಲಿ ಒಂದು. ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಕ್ರಿಸ್ ಮಸ್ ಹಬ್ಬದ ಇತಿಹಾಸ, ಮಹತ್ವ, ಆಚರಣೆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸೆಂಬರ್ ತಿಂಗಳು ಬಂತೆಂದರೆ ಮೊದಲು ನೆನಪಾಗುವುದೇ ಕ್ರಿಸ್ ಮಸ್ ಹಬ್ಬ. ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಈ ಕ್ರಿಸ್ ಮಸ್ ಕೂಡ ಒಂದು. ಈ ಹಬ್ಬವನ್ನು ವಿಶ್ವದಾದ್ಯಂತ ಡಿಸೆಂಬರ್ 25 ರಂದು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಡಿಸೆಂಬರ್ 25ರಂದು ಆಚರಿಸುವ ಈ ಹಬ್ಬದ ಸಂಭ್ರಮವು ಡಿಸೆಂಬರ್ 24ರ ರಾತ್ರಿಯಿಂದಲೇ ಆರಂಭಗೊಳ್ಳುವುದು ವಿಶೇಷ. ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲಹೆಮ್ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದರು. ಯೇಸು ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮಿಯರು ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲಾ ಜನರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷ.
ಕ್ರಿಸ್‌ಮಸ್ ಹಬ್ಬದ ಇತಿಹಾಸ
ಎರಡು ಸಾವಿರ ವರ್ಷಗಳ ಹಿಂದೆ ಯುರೋಪಿನಲ್ಲಿ ಚಳಿಗಾಲದ ಸಂದರ್ಭದಲ್ಲಿ ದೀರ್ಘವಾದ ರಾತ್ರಿಯಲ್ಲಿ ಯೇಸುವಿನ ಜನನವಾಗಿತ್ತು. ಜೀಸಸ್ ಕ್ರೈಸ್ಟ್ ಮೇರಿ ಮತ್ತು ಜೋಸೆಫ್ ದಂಪತಿಗೆ ಲೆಹಮ್ನ ಮ್ಯಾಂಗರ್ನಲ್ಲಿ ಯೇಸು ಜನಿಸಿದ್ದ. ಆಗ ಗ್ರೆಗೋರಿಯನ್ ಕ್ಯಾಲೆಂಡರ್ ಬಳಸುತ್ತಿದ್ದ ಕಾರಣ ಡಿಸೆಂಬರ್ 25 ರಂದು ಯೇಸು ಜನನವಾಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಬೈಬಲ್ನಲ್ಲಿ ಕೂಡ ಯೇಸುವಿನ ಜನ್ಮ ದಿನಾಂಕವನ್ನು ಕೂಡ ಉಲ್ಲೇಖಿಸಲಾಗಿಲ್ಲ. ಚಕ್ರವರ್ತಿ ಕಾನ್ಸ್ಟೈನ್ ಮೊದಲ ಬಾರಿಗೆ ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಿಸಬೇಕೆಂದು ಘೋಷಿಸಿದ್ದರು. ಆದಾದ ಕೆಲವು ವರ್ಷಗಳ ನಂತರ ಪೋಪ್ ಜೂಲಿಯನ್ 1 ಕೂಡ ಡಿಸೆಂಬರ್ 25 ನ್ನು ಕ್ರಿಸ್ತನ ಜನ್ಮದಿನವೆಂದು ಘೋಷಿಸಿದರು. ಆರಂಭಿಕ ದಿನಗಳಲ್ಲಿ ಯೇಸು ಹುತಾತ್ಮನೆಂದು ನಂಬಿದ್ದ ಜನ ಕ್ರಿಸ್ತನದ ಜನನ ದಿನದ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ತದನಂತರದಲ್ಲಿ ಹುತಾತ್ಮರನ್ನು ಗೌರವಿಸುವ ಸಲುವಾಗಿ ಕ್ರಿಸ್ಮಸ್ ದಿನವನ್ನು ರಜಾದಿನವೆಂದು ಘೋಷಿಸಿ ಈ ಹಬ್ಬವನ್ನು ಆಚರಿಸಲಾಯಿತು.
ಕ್ರಿಸ್ ಮಸ್ ಹಬ್ಬದ ಮಹತ್ವ ಹಾಗೂ ಆಚರಣೆ
ಕ್ರಿಸ್ ಮಸ್ ಕ್ರಿಶ್ಚಿಯನ್ ಸಮುದಾಯದವರಿಗೆ ವಿಶೇಷವಾದ ದಿನವಾಗಿದೆ. ದೇವರು ತನ್ನ ಮಗನನ್ನು ಭೂಮಿಯಲ್ಲಿರುವ ಜನತೆಗೆ ತ್ಯಾಗ ಮತ್ತು ಮಾನವೀಯ ಗುಣಗಳನ್ನು ತಿಳಿಸಲು ಕಳುಹಿಸಿದ್ದಾರೆ. ಜನರಿಗೋಸ್ಕರ ತ್ಯಾಗ ಮಾಡಿ ಯೇಸುಕ್ರಿಸ್ತ ಶಿಲುಬೆಗೆ ಏರಿದ್ದಾನೆ ಎನ್ನುವ ನಂಬಿಕೆಯೂ ಇದೆ. ಅದಲ್ಲದೇ, ಯುಎಸ್ ಮತ್ತು ಇತರ ದೇಶಗಳಲ್ಲಿ ಸಾಂತಾ ಕ್ಲಾಸ್ ಎನ್ನುವ ವ್ಯಕ್ತಿಯ ಪರಿಕಲ್ಪನೆಯಿದೆ. ಉತ್ತರ ದ್ರುವದಲ್ಲಿ ವಾಸಿಸುವ ಸಾಂತಾ ಕ್ರಿಸ್ ಮಸ್ ಹಿಂದಿನ ದಿನ ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಾನೆ ಎಂದು ನಂಬುತ್ತಾರೆ.
ಡಿಸೆಂಬರ್ 24ರ ರಾತ್ರಿಯಿಂದಲೇ ಕ್ರಿಸ್ ಮಸ್ ಹಬ್ಬದ ಸಂಭ್ರಮವು ಆರಂಭಗೊಳ್ಳುತ್ತದೆ. ಡಿಸೆಂಬರ್ 24 ರಂದು ಕ್ರಿಸ್ ಮಸ್ ಈವ್ ದಿನದಂದು ಕ್ರಿಶ್ಚಿಯನ್ ಸಮುದಾಯದ ಜನರೆಲ್ಲರೂ ಚರ್ಚ್ ನಲ್ಲಿ ಸೇರುತ್ತಾರೆ. ಕ್ಯಾರೋಲೆಲ್ಗಳನ್ನು ಹಾಡುವ ಮೂಲಕ ಪ್ರಸ್ತುತ ವರ್ಷಕ್ಕೆ ಅಂತ್ಯ ಹೇಳಿ ಹೊಸವರ್ಷವನ್ನು ಸ್ವಾಗತಿಸುವುದು ಬಹಳ ವಿಶೇಷ. ಇನ್ನು ಕ್ರಿಸ್‌ಮಸ್ ಹಬ್ಬದ ದಿನ ಯೇಸುವಿನ ನೆನಪಿಗಾಗಿ ಗೋಶಾಲೆಯನ್ನು ನಿರ್ಮಿಸುತ್ತಾರೆ. ಈ ಗೋಶಾಲೆಯು ಕುರುಬರೊಂದಿಗಿನ ಯೇಸುವಿನ ಬಾಲ್ಯವನ್ನು ಚಿತ್ರಿಸುವುದೇ ವಿಶೇಷ. ಕೈಸ್ತ್ರರು ತಮ್ಮ ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳು, ಕ್ರಿಸ್ಮಸ್ ಟ್ರೀ ಇಟ್ಟು ಲೈಟ್, ರಿಬ್ಬನ್ಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಮನೆಯನ್ನು ದೀಪಗಳಿಂದ ಅಲಂಕರಿಸಿ ಹಬ್ಬದ ರಂಗನ್ನು ಹೆಚ್ಚಿಸುತ್ತಾರೆ. ಈ ವಿಶೇಷ ದಿನದಂದು ಕೇಕ್, ವೈನ್ ಸೇರಿದಂತೆ ಸಿಹಿತಿನಿಸುಗಳನ್ನು ವಿನಿಮಯ ಮಾಡಿಕೊಂಡು ಕ್ರಿಸ್ಮಸನ್ನು ಅದ್ದೂರಿಯಾಗಿ ಆಚರಿಸುತ್ತಾರೆ.