Allu Arjun: ಸಂಧ್ಯಾ ಚಿತ್ರಮಂದಿರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೆ ಅಲ್ಲು ಅರ್ಜುನ್ ಬಂಧನವಾಗಿತ್ತು. ನಿನ್ನೆ (ಡಿಸೆಂಬರ್ 23) ಅಲ್ಲು ಅರ್ಜುನ್ಗೆ ಪೊಲೀಸರು ಹೊಸ ನೊಟೀಸ್ ನೀಡಿದ್ದರು. ಇಂದು (ಡಿಸೆಂಬರ್ 24) ಅಲ್ಲು ಅರ್ಜುನ್ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಈ ಬಾರಿ ಅವರ ವಕೀಲರು ಸಹ ಜೊತೆಗೆ ಇರಲಿದ್ದಾರೆ.
ಸಂಧ್ಯಾ ಚಿತ್ರಮಂದಿರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಗೆ ನಿನ್ನೆಯಷ್ಟೆ ಚಿಕ್ಕಡಪಲ್ಲಿ ಪೊಲೀಸರು ಮತ್ತೊಮ್ಮೆ ನೊಟೀಸ್ ನೀಡಿದ್ದರು. ಕಳೆದ ವಾರವಷ್ಟೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದರು, ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದ ಅಲ್ಲು ಅರ್ಜುನ್ ಮರು ದಿನವೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ನಿನ್ನೆ ಪೊಲೀಸರು ಮತ್ತೊಮ್ಮೆ ನೊಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಅದರಂತೆ ಅಲ್ಲು ಅರ್ಜುನ್ ಇಂದು (ಡಿಸೆಂಬರ್ 24) ಬೆಳಿಗ್ಗೆ ಚಿಕ್ಕಡಪಲ್ಲಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಮನೆಯಿಂದ ವಿಚಾರಣೆಗೆ ತೆರಳುವ ಮುನ್ನ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಕೈ ಬೀಸಿ, ಪತ್ನಿ ಹಾಗೂ ಮಕ್ಕಳನ್ನು ತಬ್ಬಿಕೊಂಡು, ಹಾಜರಿದ್ದ ತಂದೆ ಅಲ್ಲು ಅರವಿಂದ್ ಹಾಗೂ ಮಾವ ಚಂದ್ರಶೇಖರ ರೆಡ್ಡಿ ಅವರಿಗೆ ಕೈ ಕುಲುಕಿ ವಿಚಾರಣೆಗೆ ತೆರಳಿದರು. ಆದರೆ ಈ ಬಾರಿ ವಕೀಲರ ಸಮ್ಮುಖದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಡಿಸೆಂಬರ್ 04 ರಂದು ನಟ ಅಲ್ಲು ಅರ್ಜುನ್ ತಮ್ಮ ಪತ್ನಿ, ಮಕ್ಕಳು ಹಾಗೂ ರಶ್ಮಿಕಾ ಮಂದಣ್ಣ ಅವರೊಡನೆ ಸಂಧ್ಯಾ ಚಿತ್ರಮಂದಿರಕ್ಕೆ ‘ಪುಷ್ಪ 2’ ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಈ ವೇಳೆ ನಡೆದ ನೂಕಾಟದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಪತಿ ಅಲ್ಲು ಅರ್ಜುನ್ ಹಾಗೂ ಚಿತ್ರಮಂದಿರದ ಮೇಲೆ ದೂರು ನೀಡಿದ್ದರು.
ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಹಾಗೂ ಸಂಧ್ಯಾ ಚಿತ್ರಮಂದಿರ ಮಾಲೀಕ ಹಾಗೂ ಮ್ಯಾನೇಜರ್ ಅನ್ನು ಬಂಧಿಸಿದ್ದರು. ಆದರೆ ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ಗೆ ತುರ್ತು ಅರ್ಜಿ ಹಾಕಿ ಒಂದೇ ದಿನದಲ್ಲಿ ಮಧ್ಯಂತರ ಜಾಮೀನು ಪಡೆದುಕೊಂಡರು. ಆದರೆ ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ಕಳೆಯಬೇಕಾಯ್ತು.