ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ತೆರೆಗೆ ಬಂದಿದೆ. ಸಿನಿಮಾ ಮೊದಲ ದಿನ ದಾಖಲೆಯ ಗಳಿಕೆ ಮಾಡಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತವಾಗಿ ಹಂಚಿಕೊಂಡಿರುವ ಮಾಹಿತಿಯಂತೆ ‘ಪುಷ್ಪ 2’ ಸಿನಿಮಾ ವಿಶ್ವದಾದ್ಯಂತ ಮೊದಲ ದಿನ 295 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಷ್ಟು ದೊಡ್ಡ ಮೊತ್ತವನ್ನು ಮೊದಲ ದಿನ ಗಳಿಸಿದ ಇನ್ನೊಂದು ಭಾರತೀಯ ಸಿನಿಮಾ ಇಲ್ಲ. ಮೊದಲ ದಿನ ‘ಪುಷ್ಪ 2’ ದಾಖಲೆಯ ಮೊತ್ತ ಗಳಿಕೆ ಮಾಡಿದೆ, ಆದರೆ ಎರಡನೇ ದಿನಕ್ಕೆ ಅದೇ ಮುಮೆಂಟಮ್ ಅನ್ನು ಉಳಿಸಿಕೊಂಡಿದೆಯೇ? ಮೊದಲ ದಿನದ ವಿಮರ್ಶೆಗಳ ಬಳಿಕ ಎರಡನೇ ದಿನ ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದಾರೆಯೇ? ಆ ಪ್ರಶ್ನೆಗೆ ‘ಪುಷ್ಪ 2’ ಸಿನಿಮಾದ ಎರಡನೇ ದಿನದ ಬಾಕ್ಸ್ ಆಫೀಸ್ ಗಳಿಕೆ ಉತ್ತರ ನೀಡಿದೆ.
‘ಪುಷ್ಪ 2’ ಸಿನಿಮಾಕ್ಕೆ ಬಂಡವಾಳ ಹೂಡಿರುವ ಮತ್ರಿ ಮೂವಿ ಮೇಕರ್ಸ್ ‘ಪುಷ್ಪ 2’ ಸಿನಿಮಾದ ಎರಡನೇ ದಿನದ ಗ್ಲೋಬಲ್ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಂಡಿದೆ. ಎರಡನೇ ದಿನಕ್ಕೆ ‘ಪುಷ್ಪ 2’ ಸಿನಿಮಾದ ವಿಶ್ವ ಬಾಕ್ಸ್ ಕಲೆಕ್ಷನ್ 449 ಕೋಟಿ ರೂಪಾಯಿ ಆಗಿದೆ. ಅಂದರೆ ಎರಡನೇ ದಿನ 155 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಸಾಮಾನ್ಯ ಮೊತ್ತವಲ್ಲ. ಎರಡನೇ ದಿನ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವ ಸಿನಿಮಾಗಳ ಸಂಖ್ಯೆ ಕಡಿಮೆ. ಅದರಲ್ಲೂ ‘ಪುಷ್ಪ 2’ ಸಿನಿಮಾ ಎರಡೇ ದಿನಕ್ಕೆ 449 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ಸಹ ಸಾಮಾನ್ಯ ಸಾಧನೆಯಲ್ಲ.
ಅತ್ಯಂತ ಕಡಿಮೆ ಅವಧಿಯಲ್ಲಿ 450 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಪುಷ್ಪ 2’ ಸಿನಿಮಾ ಭಾಜನವಾಗಿದೆ. ಈ ಹಿಂದೆ ‘ಆರ್ಆರ್ಆರ್’ ಸಿನಿಮಾ ಬಲು ವೇಗವಾಗಿ 500 ಕೋಟಿ ಗಳಿಕೆ ಮಾಡಿತ್ತು, ಆ ದಾಖಲೆಯನ್ನು ‘ಪುಷ್ಪ 2’ ಸಿನಿಮಾ ಮುರಿಯುವುದು ಖಾತ್ರಿ ಆಗಿದೆ. ಎರಡನೇ ದಿನದ ಕಲೆಕ್ಷನ್ಗಿಂತಲೂ ‘ಪುಷ್ಪ 2’ ಸಿನಿಮಾದ ಮೂರು ಮತ್ತು ನಾಲ್ಕನೇ ದಿನದ ಕಲೆಕ್ಷನ್ ಹೆಚ್ಚಾಗಲಿದೆ. ಮೂರು ಮತ್ತು ನಾಲ್ಕನೇ ದಿನಗಳು ವೀಕೆಂಡ್ ಆಗಿದ್ದು ಹಾಗಾಗಿ ಈ ಎರಡು ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ.
‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಮುನ್ನವೇ 1000 ಕೋಟಿ ಹಣ ಗಳಿಕೆ ಮಾಡಿತ್ತು. ಈಗ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತಾ ಅತ್ಯಂತ ವೇಗವಾಗಿ 400 ಕೋಟಿ ಮಾರ್ಕ್ ದಾಟಿದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ 1000 ಕೋಟಿ ಗಳಿಸುವತ್ತ ದಾಪುಗಾಲು ಹಾಕಿದ್ದು ಒಂದು ವಾರದ ಮುಂಚೆಯೇ ಈ ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಲಿದೆ. ‘ಪುಷ್ಪ 2’ ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಇದೇ ನಿರ್ಮಾಣ ಸಂಸ್ಥೆ ‘ಪುಷ್ಪ 3’ ಸಿನಿಮಾವನ್ನು ಸಹ ನಿರ್ಮಾಣ ಮಾಡಲಿದೆ.