ಭಾರತ ಮಹಿಳಾ ತಂಡವು ಏಕದಿನ ಕ್ರಿಕೆಟ್ನಲ್ಲಿ 200+ ರನ್ಗಳ ಅಂತರದಿಂದ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಈ ಹಿಂದೆ ಎರಡು ಬಾರಿ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ತಂಡವನ್ನು 211 ರನ್ಗಳಿಂದ ಮಣಿಸಿ ಮತ್ತೊಮ್ಮೆ ಅಮೋಘ ಗೆಲುವು ದಾಖಲಿಸಿದೆ.
ವಡೋದರಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 26.2 ಓವರ್ಗಳಲ್ಲಿ 103 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 211 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇದು ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ 2ನೇ ಅಮೋಘ ಗೆಲುವು ಎಂಬುದು ವಿಶೇಷ. ಇದಕ್ಕೂ ಮುನ್ನ 2017 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 249 ರನ್ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 50 ಓವರ್ಗಳಲ್ಲಿ 358 ರನ್ ಬಾರಿಸಿದರೆ, ಐರ್ಲೆಂಡ್ 109 ರನ್ಗಳಿಗೆ ಆಲೌಟ್ ಆಗಿತ್ತು.
ಇದೀಗ ವೆಸ್ಟ್ ಇಂಡೀಸ್ ವಿರುದ್ಧ 314 ರನ್ ಬಾರಿಸಿ, ಟೀಮ್ ಇಂಡಿಯಾ 211 ರನ್ಗಳ ಅಂತರದಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ ತನ್ನ ಎರಡನೇ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ
ಹಾಗೆಯೇ ಭಾರತ ತಂಡದ ಮೂರನೇ ಅಮೋಘ ಗೆಲುವು ಮೂಡಿಬಂದಿರುವುದು ಪಾಕಿಸ್ತಾನ್ ವಿರುದ್ಧ ಎಂಬುದು ವಿಶೇಷ. 2008 ರಲ್ಲಿ ನಡೆದ ಏಷ್ಯಾಕಪ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 283 ರನ್ ಕಲೆಹಾಕಿದರೆ, ಪಾಕಿಸ್ತಾನ್ ತಂಡವು ಕೇವಲ 76 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ತಂಡವು 207 ರನ್ಗಳ ಗೆಲುವು ದಾಖಲಿಸಿತ್ತು. ಇದೀಗ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಮೂರನೇ ಬಾರಿ 200+ ರನ್ಗಳ ಐತಿಹಾಸಿಕ ವಿಜಯ ಸಾಧಿಸಿದೆ.