ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿಇಂದಿನಿಂದ ಮೂರು ದಿನಗಳ ಕಾಲ ಕನ್ನಡ ನುಡಿ ಜಾತ್ರೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ದೊರೆತಿದೆ. ಬೆಳಗ್ಗೆ 6.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎನ್. ಚಲುವರಾಯಸ್ವಾಮಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ನಾಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಮೆರವಣಿಗೆಯಲ್ಲಿ ನಂದಿಧ್ವಜ, ಚಕ್ಕಡಿಗಾಡಿ, ಕೊಂಬುಕಹಳೆ, ನಾದಸ್ವರ, ಸ್ತಬ್ಧಚಿತ್ರ, ವೀರಗಾಸೆ, ತಮಟೆ, ಕಂಸಾಳೆ, ಮಹಿಳಾ ವೀರಗಾಸೆ, ಕೀಲುಕುದುರೆ ಸೇರಿದಂತೆ ಇತರ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ ಹೆ.ಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ.ರವಿಕುಮಾರ್, ಎಂ.ಬಿ,ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ ಹಾಗೂ ಗಣ್ಯರು ಉಪಸ್ಥಿತರಿದ್ದರು.