ಸಿ.ಟಿ.ರವಿ ನ್ಯಾಯಾಲಯಕ್ಕೆ ಹಾಜರು: ವಿಚಾರಣೆ ಅಪರಾಹ್ನ 3ಕ್ಕೆ ಮುಂದೂಡಿಕೆ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ವಿರುದ್ಧ ನೀಡಿರುವ ಮಾನಹಾನಿಕರ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿಯವರ ಜಾಮೀನು ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿ.ಟಿ.ರವಿಯನ್ನು ಹಿರೇಬಾಗೇವಾಡಿ ಠಾಣೆಯ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಇಂದು ಪೂರ್ವಾಹ್ನ 11:10ಕ್ಕೆ ಅವರನ್ನು ನಗರದ 5ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಧೀಶೆ ಸ್ಪರ್ಶಾ ಡಿಸೋಜ ಅವರು ವಿಚಾರಣೆಯನ್ನು ಇಂದು (ಡಿ.20) ಅಪರಾಹ್ನ 3ಕ್ಕೆ ಮುಂದೂಡಿದ್ದಾರೆ. ಅಪರಾಹ್ನ ಸರಕಾರಿ ಪರ ವಕೀಲರು ವಾದ ಮಂಡಿಸಲಿದ್ದಾರೆ.

ಸಿ.ಟಿ.ರವಿ ಪರವಾಗಿ ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ವಕೀಲ ಎಂ.ಬಿ.ಝಿರಲಿ ವಾದ ಮಂಡಿಸಿದರು. ಏನಿದು ಪ್ರಕರಣ? ಗುರುವಾರ ವಿಧಾನ ಪರಿಷತ್‌ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ವಿರುದ್ಧ ಸಿ.ಟಿ.ರವಿ ಮಾನಹಾನಿಕರ ಹೇಳಿಕೆ ನೀಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಳರ್ ಸಭಾಪತಿಗೆ ದೂರು ನೀಡಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಸಿ.ಟಿ.ರವಿಯನ್ನು ಹಿರೇಬಾಗೇವಾಡಿ ಠಾಣೆಯ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಪಕ್ಷ ನಾಯಕ ಆ‌ರ್ ಅಶೋಕ್, ಉಪನಾಯಕ ಬೆಲ್ಲದ್ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯಂದ್ರ ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯಾಲಯದ ಮುಂದೆ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರೂ ಸೇರಿದ್ದರು.