ರಾಕಿ ಕಟ್ಟುವುದು ಶೋಕಿಗಾಗಿ ಅಲ್ಲ.! ಸ್ನೇಹ ಹಾಗೂ ಸಹೋದರತೆ ಬಾಂಧವ್ಯದ ಸಂಕೇತವಾಗಿ – ಬಿ.ಕೆ ಶಿವಲೀಲಾ

ಯಲ್ಲಾಪುರ: ರಾಕಿ ಕಟ್ಟುವುದು ಶೋಕಿಗಾಗಿ ಅಲ್ಲ. ಸ್ನೇಹ ಹಾಗೂ ಸಹೋದರತೆ ಬಾಂಧವ್ಯದ ಸಂಕೇತವಾದ ನೂಲಿನ‌ ರಕ್ಷೆಗೆ ಪರಮಾತ್ಮನ ಅಭಯ ಎಲ್ಲರಿಗೂ ದೊರೆಯಲಿ ಎಂಬ ಕಾರಣಕ್ಕೆ. ಸಹೋದರ ಭಾವದಿಂದ ಸಮಾಜದ ಎಲ್ಲರಿಗೂ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ರಾಕಿ ಕಟ್ಟಲಾಗುತ್ತಿದೆ ಎಂದು ಬಿ.ಕೆ ಶಿವಲೀಲಾ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ರಕ್ಷಾಬಂಧನ ಕಾರ್ಯಕ್ರಮದಲ್ಲಿ ರಕ್ಷಾಬಂಧನದ ಮಹತ್ವದ ಕುರಿತು ಮಾತನಾಡಿದರು. ದುರ್ನಡತೆ, ದುಶ್ಚಟಗಳಿಂದ ದೂರವಾಗಿ ರಾಕಿಯಿಂದ ಎಲ್ಲರ ಭಾಗ್ಯ ಬೆಳಗಲಿ ಎಂದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ ಮಾತನಾಡಿ, ಶ್ರಾವಣ ಪ್ರಕೃತಿಯ ಅರಳುವಿಕೆಯ ಸಮಯವಾಗಿದ್ದು, ಸಾಲು ಸಾಲು ಹಬ್ಬಗಳು ಮಾಸದ ಪವಿತ್ರತೆ ಹೆಚ್ಚಿಸಿದೆ. ಮನುಷ್ಯನ ಸಂವೇದನೆ ಬಲಗೊಳಿಸುವ ಮೂಲಕ ರಾಕಿ ಮಾನವೀಯ ಸಂಬಂಧಗಳ ಬೆಸೆಯುವ ಸೇತುವಾಗಲಿ ಎಂದರು. ಈ ವೇಳೆ ನಿವೃತ್ತ ನೌಕರ ಸಂಘದ ಕಾರ್ಯದರ್ಶಿ ಸುರೇಶ ಬೋರಕರ, ಬಿ.ಕೆ. ವಾಣಿಶ್ರೀ ಇದ್ದರು.