ಯಲ್ಲಾಪುರ: ಓದಿನಿಂದ ಮಾತ್ರ ಸಮಾನತೆ ಸಾಧ್ಯ. ಮಕ್ಕಳು ಹೆಚ್ಚು ಓದುವಂತಾಗಬೇಕು ಎಂದು ಬೆಂಗಳೂರು ರೋಟರಿ ಅಧ್ಯಕ್ಷೆ ರೊ. ಸುಭಾಷಿಣಿ ಹೇಳಿದರು. ಉಮ್ಮಚಗಿ ಶ್ರೀ ವಿದ್ಯಾಗಣಪತಿ ಸಭಾಭವನದಲ್ಲಿ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ನಡೆದ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆ ಹಾಗೂ ಉಚಿತ ಕಣ್ಣಿನ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಕೊಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ್ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯು ದಟ್ಟ ಅರಣ್ಯವನ್ನು ಹೊಂದಿದೆ. ಇಲ್ಲಿ ಸಿದ್ದಿ, ಗೊಂಡ, ಹಾಲಕ್ಕಿ ಒಕ್ಕಲಿಗರು, ಗೌಳಿ ಹೀಗೆ 40 ಕ್ಕಿಂತ ಹೆಚ್ಚು ರೀತಿಯ ಬುಡಕಟ್ಟು ಸಮುದಾಯಗಳಿವೆ. ಯಲ್ಲಾಪುರ, ಹಳಿಯಾಳ, ಮುಂಡಗೋಡು, ಅಂಕೋಲಾ ಹಾಗೂ ಶಿರಸಿಯ ಕೆಲವು ಭಾಗಗಳಲ್ಲಿ ಸರಿಸುಮಾರು 15,000 ಸಿದ್ದಿ ಸಮುದಾಯದವರು ವಾಸಿಸುತ್ತಿದ್ದಾರೆ. ಇವರು ಅರಣ್ಯಾವಲಂಬಿತರಾಗಿದ್ದು, ಅವರಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದರು.
ರೋಟರಿ ಶಂಕರಪಾರ್ಕ್ ಅಧ್ಯಕ್ಷ ರೊ. ತ್ರಿಪುರಾ, ರೋಟರಿ ಕ್ಲಬ್ ಶಿರಸಿಯ ಅಧ್ಯಕ್ಷ ಗಣೇಶ ಹೆಗಡೆ, ಉಮ್ಮಚಗಿ ಗ್ರಾಮ ಪಂಚಾಯತ್ ಸದಸ್ಯರಾದ ಕುಪ್ಪಯ್ಯ ಪೂಜಾರಿ ಈ ವೇಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬುಡಕಟ್ಟು ಜನಾಂಗದ ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್, ಛತ್ರಿಯನ್ನು ಒಳಗೊಂಡಿರುವ ಕಿಟ್ ವಿತರಿಸಲಾಯಿತು. ಗಣೇಶ ನೇತ್ರಾಲಯದ ವೈದ್ಯರಾದ ಡಾ.ರವೀಂದ್ರ ಆರ್. ಕುಳ್ವೇಕರ್ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿದರು.