U19 Asia Cup 2024: ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡ ಭಾರತವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಬಾಂಗ್ಲಾದೇಶ ನೀಡಿದ 198 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 139 ರನ್‌ಗಳಿಗೆ ಆಲೌಟ್ ಆಯಿತು. ಯುವ ಪಡೆಯ ಈ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣವಾಯಿತು.
ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡ, ಭಾರತ ತಂಡವನ್ನು ಸೋಲಿಸುವುದರೊಂದಿಗೆ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಅಂದರೆ ಬಾಂಗ್ಲಾದೇಶ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಅತ್ಯಂತ ಕಡಿಮೆ ಸ್ಕೋರಿಂಗ್ ಆಗಿದ್ದು, ಬಾಂಗ್ಲಾದೇಶ ತಂಡ ಅದ್ಭುತ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇತಿಹಾಸ ನಿರ್ಮಿಸಿದ ಬಾಂಗ್ಲಾ
ಬಾಂಗ್ಲಾದೇಶ ತಂಡ ಸತತ ಎರಡನೇ ಬಾರಿಗೆ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಪಂದ್ಯಾವಳಿಯನ್ನು 1989 ರಿಂದ ಆಡಲಾಗುತ್ತಿದ್ದು ಬಾಂಗ್ಲಾದೇಶ ತಂಡ ಅಂಡರ್-19 ಏಷ್ಯಾಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಎರಡನೇ ತಂಡವಾಗಿದೆ. ಉಳಿದಂತೆ ಟೀಂ ಇಂಡಿಯಾ 8 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ ಈ ಎರಡು ತಂಡಗಳನ್ನು ಹೊರತುಪಡಿಸಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ 1 ಬಾರಿ ಈ ಪಂದ್ಯಾವಳಿಯನ್ನು ಗೆದ್ದಿವೆ. ಒಂದೆಡೆ ಬಾಂಗ್ಲಾದೇಶ ಸತತ 2ನೇ ಬಾರಿಗೆ ಏಷ್ಯನ್ ಕಿರೀಟ ತೊಟ್ಟಿದ್ದರೆ, ಇತ್ತ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಸೋಲು ಕಂಡಿದೆ. ಈ ಹಿಂದೆ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಆಡಿದ ಪ್ರತಿ ಫೈನಲ್ ಪಂದ್ಯದಲ್ಲೂ ಪ್ರಶಸ್ತಿ ಜಯಿಸಿತ್ತು.
198 ರನ್ ಟಾರ್ಗೆಟ್ ನೀಡಿದ ಬಾಂಗ್ಲಾ
ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕ ನಿರ್ಧಾರವನ್ನು ಸರಿ ಎಂದು ಸಾಭೀತುಪಡಿಸಿದ ಭಾರತದ ಬೌಲರ್‌ಗಳು ಬಾಂಗ್ಲಾದೇಶ ತಂಡವನ್ನು 198 ರನ್‌ಗಳಿಗೆ ನಿರ್ಬಂಧಿಸುವಲ್ಲಿ ಯಶಸ್ವಿಯಾದರು. ತಂಡದ ಪರ ಯುಧಾಜಿತ್ ಗುಹಾ, ಚೇತನ್ ಶರ್ಮಾ ಮತ್ತು ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದರೆ, ಕಿರಣ್ ಚೋರ್ಮಲೆ, ಕೆಪಿ ಕಾರ್ತಿಕೇಯ ಮತ್ತು ಆಯುಷ್ ಮ್ಹಾತ್ರೆ ತಲಾ 1 ವಿಕೆಟ್ ಪಡೆದರು. ಮತ್ತೊಂದೆಡೆ, ಬಾಂಗ್ಲಾದೇಶ ಪರ ರಿಜಾನ್ ಹಸನ್ ಗರಿಷ್ಠ 47 ರನ್ ಗಳಿಸಿದರೆ, ಮೊಹಮ್ಮದ್ ಶಿಹಾಬ್ ಜೇಮ್ಸ್ ಕೂಡ 40 ರನ್ ಕೊಡುಗೆ ನೀಡಿದರು. ಫರೀದ್ ಹಸನ್ ಕೂಡ 39 ರನ್ ಗಳ ಇನಿಂಗ್ಸ್ ಆಡಿದರು.
ಭಾರತದ ಬ್ಯಾಟಿಂಗ್ ವಿಫಲ
199 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಆರಂಭಿಕ ಆಯುಷ್ ಮ್ಹಾತ್ರೆ 4 ರನ್ ಕಲೆ ಹಾಕಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಸತತವಾಗಿ ತಂಡದ ವಿಕೆಟ್‌ಗಳು ಬೀಳುತ್ತಲೇ ಸಾಗಿದವು. ಇದರಿಂದಾಗಿ ಭಾರತ ತಂಡವು ಪಂದ್ಯದಲ್ಲಿ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ. ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೂಡ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು. ಇವರಲ್ಲದೆ ಕೆಪಿ ಕಾರ್ತಿಕೇಯ 21 ರನ್ ಗಳಿಸಿದರೆ, ಆಂಡ್ರೆ ಸಿದ್ಧಾರ್ಥ ಕೂಡ 20 ರನ್‌ಗಳಿಗೆ ಸುಸ್ತಾದರು. ನಿಖಿಲ್ ಕುಮಾರ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ನಾಯಕ ಮೊಹಮ್ಮದ್ ಅಮಾನ್ ಖಂಡಿತವಾಗಿಯೂ ಹೋರಾಟದ ಇನ್ನಿಂಗ್ಸ್ ಆಡಿದರಾದರೂ ಅವರಿಂದಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.