ಡಮಾಸ್ಕಸ್​ಗೆ ಬಂಡುಕೋರರ ಪ್ರವೇಶ, ಅಧ್ಯಕ್ಷ ಬಶರ್ ದೇಶದಿಂದ ಪಲಾಯನ

ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್​-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಬಂಡಾಯ ಗುಂಪು ಹೇಳಿಕೊಂಡಿದೆ. ಬಂಡುಕೋರರು ಡಮಾಸ್ಕಸ್​ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ ತೊರೆದು ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ರಾಯ್ಟರ್ಸ್​ ವರದಿ ಮಾಡಿದೆ.

ಅಸ್ಸಾದ್ ರಷ್ಯಾ ಅಥವಾ ಟೆಹರಾನ್‌ಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಮತ್ತು ಅಸ್ಸಾದ್ ಅವರ ವಿಮಾನವು ರಾಡಾರ್‌ನಿಂದ ಕಾಣೆಯಾಗಿದೆ.

ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಜಲಾಲಿ ಅವರು ತಮ್ಮ ಮನೆಯಿಂದಲೇ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅವರು ದೇಶದಲ್ಲಿಯೇ ಉಳಿದು ಅಧಿಕಾರದ ಸುಗಮ ಹಸ್ತಾಂತರಕ್ಕೆ ಶ್ರಮಿಸುವುದಾಗಿ ಹೇಳಿದ್ದಾರೆ. ಬಂಡುಕೋರರ ಗುಂಪು ಸಿರಿಯಾದಲ್ಲಿ ಆಕ್ರಮಣವನ್ನು ಘೋಷಿಸಿದೆ. ಅಸ್ಸಾದ್ ಸಹೋದರ ಮಹೇರ್ ಅಲ್-ಅಸ್ಸಾದ್ ಕೂಡ ಪರಾರಿಯಾಗಿದ್ದಾರೆ. ಬಂಡುಕೋರರು ಎಲ್ಲಾ ಕಡೆಯಿಂದ ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದ್ದಾರೆ.

ಬಂಡುಕೋರರು ಡಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ. ಸೇನಾ ಪ್ರಧಾನ ಕಛೇರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಡುಕೋರ ಗುಂಪುಗಳಿಗೆ ಅಮೆರಿಕ ಮತ್ತು ಇರಾನ್ ಬೆಂಬಲವಿದೆ. ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಬಂಡುಕೋರ ಗುಂಪುಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿವೆ.

ಅವರು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಒಗ್ಗಟ್ಟಾಗಿ ಇರುವಂತೆ ಸಿರಿಯಾದ ಜನತೆಗೆ ಅವರು ಮನವಿ ಮಾಡಿದ್ದಾರೆ. ಸಿರಿಯಾದಲ್ಲಿ ಇನ್ನು ಮುಂದೆ ಯಾರೂ ಪ್ರಾಬಲ್ಯ ಸಾಧಿಸುವುದಿಲ್ಲ ಎಂದು ಅವರು ಹೇಳಿದರು. ಏತನ್ಮಧ್ಯೆ, ಡಮಾಸ್ಕಸ್‌ನಲ್ಲಿ ಸೇನೆಯ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬಶರ್ ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದರು. ಡೌಮಾದಲ್ಲಿ ಅಸ್ಸಾದ್‌ನ ಪಡೆಗಳು ಇಬ್ಬರು ಪ್ರತಿಭಟನಾಕಾರರನ್ನು ಕೊಂದಿದ್ದಾರೆ.

ಸಿರಿಯಾದ ಅಧ್ಯಕ್ಷರ ಬ್ರಿಟಿಷ್ ಮೂಲದ ಪತ್ನಿ ಅಸ್ಮಾ ಅಲ್-ಅಸ್ಸಾದ್ ಕಳೆದ ವಾರ ತನ್ನ ಮೂರು ಮಕ್ಕಳೊಂದಿಗೆ ದೇಶದಿಂದ ಪಲಾಯನ ಮಾಡಿದ್ದಾರೆ. ರಷ್ಯಾ ಯಾವಾಗಲೂ ಸಿರಿಯಾಕ್ಕೆ ಸಹಾಯ ಮಾಡುತ್ತಿದೆ. ಆದರೆ ಪ್ರಸ್ತುತ ರಷ್ಯಾ ಉಕ್ರೇನ್ ವಿರುದ್ಧ ಯುದ್ಧದಲ್ಲಿದೆ, ಇದರಿಂದಾಗಿ ಪುಟಿನ್ ಮೊದಲಿನಂತೆ ಸಿರಿಯಾಕ್ಕೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ.

ಶನಿವಾರ ಒಂದೇ ದಿನದಲ್ಲಿ ಸಿರಿಯಾ ನಾಲ್ಕು ನಗರಗಳನ್ನು ಕಳೆದುಕೊಂಡಿತು. ದಾರಾ, ಕುನೀತ್ರಾ, ಸುವೈದಾ ಮತ್ತು ಹೋಮ್ಸ್ ಈಗ ಬಂಡುಕೋರರ ನಿಯಂತ್ರಣದಲ್ಲಿದೆ.