ಬಾಗಲಕೋಟೆ: ವಿಜಯಪುರ, ಯಾದಗಿರಿಯ ಬೆನ್ನಲ್ಲೇ ತೇರದಾಳ ತಾಲೂಕು ವ್ಯಾಪ್ತಿಯಲ್ಲೂ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿದೆ.
2017, 2018, 2024 ರಲ್ಲಿ ಬೆಂಗಳೂರಿನ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿದ್ದು, ತೇರದಾಳ ತಾಲೂಕಿನ ವಿವಿಧ ಹಳ್ಳಿಯ 420 ಎಕ್ರೆಗೆ ಸಂಬಂಧಿಸಿದಂತೆ 111 ಮಂದಿ ರೈತರಿಗೆ ನೋಟಿಸ್ ನೀಡಲಾಗಿದೆ.
ತೇರದಾಳ ಜಾಮಿಯಾ ಮಸೀದಿ ಈದ್ಗಾ ಮಸೀದಿ ವ್ಯಾಪ್ತಿಯ ವಕ್ಪ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದೀರಿ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಬೆಂಗಳೂರು ವಕ್ಪ್ ಕೋರ್ಟ್‌ಗೆ ಹಾಜರಾಗಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ನೋಟಿಸ್‌ನಿಂದಾಗಿ ಈ ಭಾಗದ ರೈತರು 2018 ರಿಂದ ನಿರಂತರವಾಗಿ ವಕ್ಪ್ ಕೋರ್ಟ್ ವಿಚಾರಣೆಗೆ ಅಲೆದಾಡುತ್ತಿದ್ದಾರೆ.
ಈ ವಿಷಯ ತಿಳಿದು ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸಚಿವರು, ಸರ್ಕಾರದ ಅಧಿಕಾರಿಗಳು ನೋಟಿಸ್ ನೀಡಿಲ್ಲ ಎನ್ನುತ್ತಾರೆ. ಆದರೆ ನಮ್ಮಲ್ಲಿ ಇಷ್ಟು ಜನರಿಗೆ ನೋಟಿಸ್ ಬಂದಿದೆ. ಈ ಕಾಂಗ್ರೆಸ್ ಪಕ್ಷ ಉಗ್ರಗಾಮಿಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ನಾವು ರೈತರಿಗೆ ನೋಟಿಸ್ ಕೊಟ್ಟಿಲ್ಲ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇಲ್ಲಿ ನೋಡಿದರೆ ನಮ್ಮಲ್ಲಿ ನೂರಾರು ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ತಿಂಗಳಿಗೊಮ್ಮೆ ನೂರಾರು ರೈತರು ಕೋರ್ಟಿಗೆ ಹೋಗುತ್ತಿದ್ದಾರೆ ಇದು ಕಾಂಗ್ರೆಸ್ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.
ನಮ್ಮ ರೈತರ ಜಮೀನನ್ನು ವಕ್ಫ್ ಬೋರ್ಡ್ ಕಸಿದುಕೊಂಡಿದೆ. ಕೂಡಲೇ ಆ ಜಮೀನು ನಮ್ಮ ರೈತರಿಗೆ ಹಸ್ತಾಂತರ ಮಾಡಬೇಕು. ಇಲ್ಲದೇ ಇದ್ದರೆ ಇಡೀ ದೇಶದ ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ ಹಿಂಜರಿಯುವುದಿಲ್ಲ. ವಕ್ಫ್ ಬೋರ್ಡ್ ಕಾಯ್ದೆಯನ್ನು ರದ್ದುಪಡಿಸಿದರೆ ಮಾತ್ರ ಈ ದೇಶಕ್ಕೆ ನ್ಯಾಯ ಸಿಕ್ಕಂತಾಗುತ್ತೆ ಎಂದು ಹೇಳಿದರು.
ತೇರದಾಳ ಮತ್ತು ಜಮಖಂಡಿ ಕ್ಷೇತ್ರದಲ್ಲಿ ನೂರಾರು ಎಕರೆ ಜಮೀನನ್ನು ವಕ್ಫ್ ಬೋರ್ಡ್ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕೇವಲ ಒಂದು ಜನಾಂಗದ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿರುವುದು ಇದು ಸರಿಯಲ್ಲ. ನಾವು ಎಲ್ಲರೂ ಸಮಾನರು ಎಂದು ಮನೋಭಾವನೆಯನ್ನು ಕಾಂಗ್ರೆಸ್ ಸರ್ಕಾರ ಮೊದಲು ಇಟ್ಟುಕೊಳ್ಳಬೇಕಿದೆ ಎಂದರು.