ದೀಪಾವಳಿ: ಆರ್​ಟಿಒ ಎಚ್ಚರಿಕೆಗೂ ಬಗ್ಗದ ಖಾಸಗಿ ಬಸ್​ಗಳು, ಗಗನಕ್ಕೇರಿದ ಟಿಕೆಟ್ ದರ

ಬೆಂಗಳೂರು, ಅಕ್ಟೋಬರ್ 28: ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ರಜೆಗಳು ಸಮೀಪಿಸುತ್ತಿದ್ದಂತೆಯೇ ಖಾಸಗಿ ಬಸ್ ಟಿಕೆಟ್ ದರಗಳು ಗಗನಕ್ಕೇರಿದೆ. ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಖಾಸಗಿ ಬಸ್​ಗಳು 1,000 ರೂ.ನಿಂದ 1,500 ರೂ.ವರಗೆ ಟಿಕೆಟ್ ದರ ವಸೂಲಿ ಮಾಡುತ್ತಿವೆ. ಕೆಲವು ಬಸ್​​ಗಳಲ್ಲಂತೂ ಟಿಕೆಟ್ ದರ 2,000 ರೂ. ವರೆಗೆ ಇದೆ.

ನೈಋತ್ಯ ರೈಲ್ವೆ ವಿಶೇಷ ದೀಪಾವಳಿ ರೈಲುಗಳ ಸೇವೆ ಒದಗಿಸುತ್ತಿದೆ. ಆದರೆ, ವಿಶೇಷ ರೈಲುಗಳ ಎಲ್ಲ ಸೀಟುಗಳು ಈಗಾಗಲೇ ಕಾಯ್ದಿರಿಸಲಾಗಿವೆ. ಹೀಗಾಗಿ ಬಸ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಎಸ್​​ಆರ್​ಟಿಸಿ ಬಸ್​​ಗಳಲ್ಲಿಯೂ ಬಹುತೇಕ ಸೀಟ್​​ಗಳು ಮುಂಗಡ ಕಾಯ್ದಿರಿಸಲಾಗಿದೆ. ವಿಶೇಷ ಬಸ್​ಗಳಲ್ಲಿಯೂ ಮುಂಗಡ ಕಾಯ್ದಿರಿಸುವಿಕೆ ಜೋರಾಗಿದೆ. ಹೀಗಾಗಿ ಪ್ರಯಾಣಿಕರು ದುಬಾರಿ ದರ ತೆತ್ತು ಆನ್‌ಲೈನ್‌ನಲ್ಲಿ ಖಾಸಗಿ ಬಸ್‌ಗಳ ಟಿಕೆಟ್​ ಖರೀದಿಸುತ್ತಿದ್ದಾರೆ.

ಬೆಂಗಳೂರು ಹಾಗೂ ಉಡುಪಿ ಮಧ್ಯೆ ಸಾಮಾನ್ಯವಾಗಿ 400 ರೂ.ನಿಂದ 700 ರೂ. ಇರುತ್ತಿದ್ದ ಖಾಸಗಿ ಬಸ್ ಟಿಕೆಟ್ ದರ ಈಗ 1,000 ರೂ. ದಾಟಿದೆ.

ಹೆಚ್ಚುವರಿ ಖಾಸಗಿ ಬಸ್​ಗಳು: ಟಿಕೆಟ್ ದರ ದುಬಾರಿ

ಹಬ್ಬ ಹಾಗೂ ದೀರ್ಘ ವಾರಾಂತ್ಯದ ಕಾರಣ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಗೆ ಅನುಗುಣವಾಗಿ ಕೆಲವು ಖಾಸಗಿ ಬಸ್ ಸಂಸ್ಥೆಗಳೂ ಸಹ ಹೆಚ್ಚುವರಿ ಬಸ್​ಗಳನ್ನು ನಿಯೋಜಿಸಲು ಮುಂದಾಗಿವೆ. ಆದರೆ, ಈ ಬಸ್​ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ನಿಗದಿಪಡಿಸಲಾಗುತ್ತಿದೆ. ಲಗೇಜ್‌ಗೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ಅಲವತ್ತುಕೊಳ್ಳುತ್ತಿದ್ದಾರೆ.

ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಸ್ಥಿರ

ಮತ್ತೊಂದೆಡೆ, ಮಂಗಳೂರು ಮತ್ತು ಬೆಂಗಳೂರು ನಡುವಿನ ಕೆಎಸ್‌ಆರ್‌ಟಿಸಿ ಬಸ್ ದರಗಳು ಸ್ಥಿರವಾಗಿವೆ. ಹೆಚ್ಚುವರಿ ವಿಶೇಷ ಬಸ್​​ ಸೇವೆಗಳಿಗೆ ಮಾತ್ರ ಶೇ 20 ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಡುಪಿ ಮತ್ತು ಕುಂದಾಪುರ ಮಾರ್ಗಗಳು ಸೇರಿದಂತೆ ಕರಾವಳಿ ಪ್ರದೇಶಗಳಿಗೆ ಈವರೆಗೆ 18 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ನಿಯೋಜಿಸಿದೆ.