ಚಾಮರಾಜನಗರ, ಅ.27: ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ವರ್ಷ ಕಳೆದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಬಸ್ನಲ್ಲಿ ಮಹಿಳೆಯರಿಗೆ ಉಚಿತವಾಗಿ ಟಿಕೆಟ್ ನೀಡುತ್ತಾರೆ. ಆದರೆ, ಚಾಮರಾಜನಗರದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮಹಿಳೆಯರಿಂದ ಹಣ ಪಡೆದು, ಉಚಿತ ಟಿಕೆಟ್ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ದೂರು ಕೊಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ವೊಂದು ಶನಿವಾರ ಬೇಡರಪುರದಿಂದ ಚಾಮರಾಜನಗರಕ್ಕೆ ಹೊರಟಿತ್ತು. ಬಸ್ ನಿರ್ವಾಹಕ ಮಹಿಳೆಯರಿಂದ ಹಣ ಪಡೆದು, ಶೂನ್ಯ ಬೆಲೆಯ ಉಚಿತ ಟಿಕೆಟ್ ನೀಡಿದ್ದಾನೆ. ಇದೇ ಬಸ್ನಲ್ಲಿ ಸಂಚರಿಸುತ್ತಿದ್ದ ಕೆಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ವಿಚಾರವಾಗಿ ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಿರ್ವಾಹಕ ಸಮರ್ಥನೆ ನೀಡಿದ್ದಾನೆ.
ಆದರೆ, ನಿರ್ವಾಹಕನ ನಡೆ ಖಂಡಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ದೂರು ನೀಡಿದ್ದಾನೆ. ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಉಚಿತ ಟಿಕೆಟ್ ಹೆಸರಿನಲ್ಲಿ ನಿರ್ವಾಹಕ ಹಣ ಹೊಡೆಯುತ್ತಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.