ವಿಡಿಯೋ ಮುಂದಿಟ್ಟು ಕಾಂಗ್ರೆಸ್ ನಾಯಕನಿಗೆ ಬ್ಲ್ಯಾಕ್‌ಮೇಲ್

ಬೆಂಗಳೂರು, ಅ.27 : ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಅವರಿಗೆ ವಾಟ್ಸಪ್​ ಮೂಲಕ ವಿಡಿಯೊ ಕರೆಗಳನ್ನು ಮಾಡಿ ಬಳಿಕ ಅವುಗಳನ್ನು ರೆಕಾರ್ಡ್‌ ಮಾಡಿಕೊಂಡು ಬಳಿಕ ಹಣಕ್ಕೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್‌ ಪಾಟೀಲ ಬಂಧಿತರು. ಆರೋಪಿಗಳು ಕಲಬುರಗಿಯ ಆಳಂದ ರಸ್ತೆಯ ವಿಜಯನಗರ ಕಾಲೊನಿ ನಿವಾಸಿಗಳು. ಮಂಜುಳಾ ಪಾಟೀಲ್ ಖೆಡ್ಡಾಗೆ ಮಾಜಿ ಸಚಿವರು ಮಾತ್ರ ಅಲ್ಲ, ಇನ್ನು ಹಲವರನ್ನ ಖೆಡ್ಡಾಗೆ ಕೇಡುವಿದ ಮಾಹಿತಿ ಆಕೆಯ ಮೊಬೈಲ್​ನಲ್ಲಿ ಪತ್ತೆಯಾಗಿದೆ.

ವಿಡಿಯೋ ಮುಂದಿಟ್ಟು ಬ್ಲ್ಯಾಕ್ ಮೇಲ್

ಹಲವು ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿದ್ದ ಮಂಜುಳಾ, ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣ ಮಾಲೀಕಯ್ಯಗೆ ಆಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು. ಈ ನಡುವೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆಕೆ, ಬಳಿಕ ಇವುಗಳನ್ನು ಮುಂದಿಟ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಳು. 2 ದಿನ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವ ಮಾಲೀಕಯ್ಯ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ನಡೆಸಲು ಮಂಜುಳಾ ದಂಪತಿ ಮುಂದಾಗಿದ್ದರು. ಬಳಿಕ ಈ ಬಗ್ಗೆ ರಿತೇಶ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಸಂಬಂಧ ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್‌ ಅವರು ಶುಕ್ರವಾರ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಶನಿವಾರವೇ ಬೆಂಗಳೂರಿನ ಗರುಡಾ ಮಾಲ್‌ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು ಎಂಟು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಆರೋಪಿಗಳನ್ನು ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 21ರಂದು ರಿತೇಶ್ ಅವರಿಗೆ ಕರೆ ಮಾಡಿದ್ದ ಆರೋಪಿ ಮಂಜುಳಾ, ತಾನು ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದರು. ಮಾಲೀಕಯ್ಯ ಗುತ್ತೇದಾರ್ ಅವರು ತನಗೆ ನಿಂದನೆಯ ಸಂದೇಶ ಕಳುಹಿಸುತ್ತಿದ್ದಾರೆ. ಈ ಸಂಬಂಧ ತಮ್ಮೊಂದಿಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದರು. ನಂತರ, ಕೊಡಿಗೇಹಳ್ಳಿಯ ಸ್ವಾತಿ ಗಾರ್ಡೆನಿಯಾ ಹೋಟೆಲ್‌ನಲ್ಲಿ ರಿತೇಶ್ ಅವರನ್ನು ಆರೋಪಿಗಳು ಭೇಟಿ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಹಣಕ್ಕೆ ಬೇಡಿಕೆ: ಮಾಲೀಕಯ್ಯ ಅವರ ವಿರುದ್ಧ ಪೊಲೀಸರಿಗೆ ಯಾವುದೇ ದೂರು ನೀಡದಿರಲು ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡದಿರಲು 20 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಕ್ಟೋಬರ್ 23 ಹಾಗೂ 24ರಂದು ಪದೇ ಪದೇ ವಾಟ್ಸಪ್ ಕರೆ ಮಾಡಿ ಹಣ ನೀಡಿದರೆ ನಿಂದನೆ ಸಂದೇಶಗಳನ್ನು ಡಿಲಿಟ್ ಮಾಡುತ್ತೇವೆ. ಇಲ್ಲದಿದ್ದರೆ ಬಹಿರಂಗ ಪಡಿಸುವುದಾಗಿ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.