ಶಿವಮೊಗ್ಗ: ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಒಬ್ಬರನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಸಿನಿಮೀಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದ ಸಹ್ಯಾದ್ರಿ ಕಾಲೇಜು ಬಳಿ ಸಂಚಾರ ಠಾಣೆ ಪೊಲೀಸರು ವಾಹನ ತಡೆದು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮುಂಭಾಗ ಬಿ.ಹೆಚ್ ರಸ್ತೆಯಲ್ಲಿ ವಾಹನ ತಡೆದು ತಪಾಸಣೆ ನಡೆಸುವಾಗ ಘಟನೆ ಸಂಭವಿಸಿದೆ.
ಬಿ.ಹೆಚ್ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಪೂರ್ವ ಸಂಚಾರ ಠಾಣೆಯ ಸಿಬ್ಬಂದಿಯೊಬ್ಬರು ಕಾರು ತಡೆದಿದ್ದಾರೆ. ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸದೇ ಮುಂದೆ ಚಲಾಯಿಸಿದ್ದಾನೆ. ಪೊಲೀಸ್ ಸಿಬ್ಬಂದಿ ಕೂಡಲೆ ಕಾರಿನ ಮುಂಭಾಗ ಹಿಡಿದುಕೊಂಡು ಬಾನೆಟ್ ಮೇಲೆ ಹತ್ತಿದ್ದಾರೆ.
ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿ ಇದ್ದರೂ ಚಾಲಕ ಕಾರು ನಿಲ್ಲಿಸದೆ ಸಹ್ಯಾದ್ರಿ ಕಾಲೇಜು ಗೇಟ್‌ನಿಂದ ಮತ್ತೂರು ರಸ್ತೆವರೆಗೂ ಸಾಗಿದ್ದಾನೆ. ಅಲ್ಲಿಂದ ಮುಂದೆ ಕಾರು ನಿಂತಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಕಾರು ಚಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದು, ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಕಾರು ಚಾಲಕನನ್ನು ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ಮಿಥುನ್ ಜಗದಾಳೆ ಎಂದು ಗುರುತಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.