ಶಿವಮೊಗ್ಗ: ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಸಾವು; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಶಿವಮೊಗ್ಗ, ಆಗಸ್ಟ್​ 26: ಕಾಡಾನೆ ದಾಳಿಗೆ 41 ವರ್ಷದ ಕೃಷಿ ಕಾರ್ಮಿಕ ಮೃತಪಟ್ಟಿರುವ ಘಟನೆ ಶಿವಮೊಗ್ಗ ವನ್ಯಜೀವಿ ವಿಭಾಗದ ಪುರದಾಳ್​ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ಹನುಮಂತಪ್ಪ ಮೃತದುರ್ದೈವಿ. ಹನುಮಂತಪ್ಪ ಕಳೆದ ಐದು ವರ್ಷಗಳಿಂದ ಅಡಿಕೆ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದನು.

ಘಟನೆ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ ಮಾತನಾಡಿ, ಹನುಮಂತಪ್ಪ ಅವರು ಅಶ್ಫಾಕ್ ಅಹ್ಮದ್ ಖಾನ್ ಒಡೆತನದ ಎಸ್ಟೇಟ್‌ನಲ್ಲಿ ಕೆಲಸ ಮುಗಿಸಿ ಆಲದೇವರ ಹೊಸೂರಿನ ಮನೆಗೆ ವಾಪಸಾಗುತ್ತಿದ್ದಾಗ ಆನೆ ದಾಳಿ ಮಾಡಿದೆ. ಶವಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹನುಮಂತಪ್ಪ ಅವರ ಕುಟುಂಬಕ್ಕೆ ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಸ್ಥಳೀಯ ನಿವಾಸಿ ಬಸವರಾಜೇಂದ್ರ ಮಾತನಾಡಿ, ಹನುಮಂತಪ್ಪ ಸಾಮಾನ್ಯವಾಗಿ ರಾತ್ರಿ 7 ಗಂಟೆ ಸುಮಾರಿಗೆ ಮನೆಗೆ ವಾಪಾಸ್​ ಆಗುತ್ತಿದ್ದರು. ಆದರೆ ಭಾನುವಾರ ರಾತ್ರಿ ಎಟ್ಟೊತ್ತಾದರೂ, ಮನೆಗೆ ಹಿಂದಿರುಗಲಿಲ್ಲ. ಇದರಿಂದ ಹನುಮಂತಪ್ಪ ಅವರ ಪತ್ನಿ ಆತಂಕಗೊಂಡಿದ್ದರು. ಬಳಿಕ, ನಾವು ಹುಡುಕಾಟ ನಡೆಸಿದಾಗ ಒಂದು ಗಂಟೆಯ ನಂತರ ಹುಮಂತ್ತಪ್ಪ ಅವರ ಮೃತ ದೇಹವ ಪತ್ತೆಯಾಯಿತು ಎಂದು ಹೇಳಿದರು.

ಆನೆಗಳು ಪದೇ ಪದೇ ನಾಡಿಗೆ ಬಂದು ಬಾಳೆ, ಭತ್ತ, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಹಾನಿ ಮಾಡುತ್ತಿವೆ. ಆನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದರು.