ಆರು ವರ್ಷಗಳ ಬಳಿಕ ಭರ್ತಿಯಾದ ಲಿಂಗನಮಕ್ಕಿ ಜಲಾಶಯ; 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಶಿವಮೊಗ್ಗ, ಆ.01: ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ತಿಂಗಳು ಧಾರಾಕಾರ ಮಳೆಯಾದ ಹಿನ್ನಲೆ ಕಳೆದ ಆರು ವರ್ಷಗಳ ನಂತರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ‌ ಲಿಂಗನಮಕ್ಕಿ‌ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆ ‌ಇಂದು (ಗುರುವಾರ) ಶಾಸಕ ಬೇಳೂರು ಗೋಪಾಲಕೃಷ್ಣ ಉಪಸ್ಥಿತಿಯಲ್ಲಿ ಕೆಪಿಸಿ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ. ಇನ್ನು ನೀರು ಧುಮ್ಮಿಕ್ಕಿರುವುದನ್ನು ನೋಡಲು ಜನರು ಮುಗಿಬಿದ್ದಿದ್ದು, ಡ್ಯಾಂ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ.

ಲಿಂಗನಮಕ್ಕಿ‌ ‌ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, ಜಲಾಶಯದ ಇಂದಿನ ಮಟ್ಟ 1814 ಅಡಿ ಇದೆ. ಸಂಪೂರ್ಣ ಭರ್ತಿಯಾಗಲು ಕೇವಲ 6 ಅಡಿ ಮಾತ್ರ ಬಾಕಿ ಉಳಿದಿದೆ. ಜಲಾಶಯದ ಒಳ ಹರಿವು 53061 ಕ್ಯೂಸೆಕ್, ಹಾಗೂ ಹೊರ ಹರಿವು‌ 10000 ಕ್ಯೂಸೆಕ್ ಇದೆ. ಜಲಾಶಯ ಭರ್ತಿಯಾಗುವ ಸಮೀಪ ತಲುಪಿದ ಹಿನ್ನೆಲೆ ಇಂದು ಲಿಂಗನಮಕ್ಕಿ‌ ‌ಜಲಾಶಯ ಗೇಟ್ ಮೇಲೆತ್ತುವ ಮೂಲಕ ನದಿಗೆ ನೀರು‌ ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆ ‌ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.