ಬೆಂಗಳೂರು: ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆಯಲ್ಲಿ ಕಟ್ಟಡ ಮಾಲೀಕ ಮುನಿರಾಜು ರೆಡ್ಡಿ ಹಾಗೂ ಆತನ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮುನಿರಾಜು ರೆಡ್ಡಿ ಆತನ ಮಗ, ಕಾಂಟ್ರ‍್ಯಾಕ್ಟರ್ ಸೇರಿ ಇತರರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಪ್ರಕರಣದಲ್ಲಿ ಒಟ್ಟು ಮೂರು ಜನರ ಹೆಸರನ್ನು ಪೊಲೀಸರು ಉಲ್ಲೇಖ ಮಾಡಿದ್ದು, ನಿರ್ಲಕ್ಷ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಕಟ್ಟಡ ನಿರ್ಮಾಣದಲ್ಲಿ ಪಿಲ್ಲರ್ ರಾಡ್ 28-30 ಎಂಎಂ ರಾಡ್ ಹಾಕಬೇಕಿತ್ತು ಆದರೆ 18-20 ಎಂಎಂ ರಾಡ್ ಬಳಸಿದ್ದಾರೆ. 14-16 ರಾಡ್ ಹಾಕಿ ಮೋಲ್ಡಿಂಗ್ ಮಾಡಬೇಕಿತ್ತು, ಆದರೆ 8-10 ಎಂಎಂ ರಾಡ್ ಬಳಸಿದ್ದಾರೆ. ಎಂ ಸ್ಯಾಂಡ್ ಹೆಚ್ಚು ಬಳಸಿ, ಸಿಮೆಂಟ್ ಕಡಿಮೆ ಬಳಸಿರುವ ಶಂಕೆ ವ್ಯಕ್ತವಾಗಿದೆ.
ಮಳೆಯಿಂದ ಈ ಘಟನೆ ಸಂಭವಿಸಿಲ್ಲ ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳಡಿ ನಿಲುಕಿರುವ ಇನ್ನೂ ಎರಡರಿಂದ ಮೂರು ಜನರಿಗಾಗಿ ಹುಡುಕಾಟ ಮುಂದುವರೆದಿದೆ.
21 ಜನರಲ್ಲಿ 18 ಜನರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈವರೆಗೆ 13 ಜನರನ್ನು ರಕ್ಷಣೆ ಮಾಡಲಾಗಿದೆ. ಐದು ಜನರ ಸಾವಾಗಿದ್ದು, ಒಟ್ಟು 18 ಕಾರ್ಮಿಕರು ಸಿಕ್ಕಿರುವ ಬಗ್ಗೆ ಮಾಹಿತಿ ಇದೆ. ಇನ್ನೂ ಮೂರು ಜನರಿಗಾಗಿ ಶೋಧಕಾರ್ಯ ಮುಂದುರೆದಿದೆ. ಜೆಸಿಬಿ ಮೂಲಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.