ಬೆಂಗಳೂರು, ಅ.18: ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯಶ್ರೀ ಸೇರಿದಂತೆ ಸಮುದಾಯದ ಘಟನಾನುಘಟಿ ನಾಯಕರು ಭಾಗಿಯಾಗಿದ್ದರು. ಆದ್ರೆ, ಸಿಎಂ ಸಿದ್ದರಾಮಯ್ಯನವರು ಈಗಲೇ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಪಂಚಮಸಾಲಿ ಮೀಸಲು ಹೋರಾಟ ಸಮಿತಿ ಅಸಮಾಧನಗೊಂಡಿದ್ದು, ಡಿಸೆಂಬರ್ 9ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಗೂ ಟ್ರಾಕ್ಟರ್ ರ್ಯಾಲಿ ನಡೆಸಲು ತೀರ್ಮಾನಿಸಿದೆ.
ಸಿಎಂ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸವ ಜಯಮೃತ್ಯುಂಜಯ ಶ್ರೀ, ಚಳಿಗಾಲದ ಅಧಿವೇಶನಕ್ಕೂ ಮುನ್ನ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೇ ಡಿಸೆಂಬರ್ 9ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಗೂ ಟ್ರಾಕ್ಟರ್ ರ್ಯಾಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಗೆ ಮುನ್ನವೇ ಮುನ್ನವೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ರೆ ನಮ್ಮ ಹೋರಾಟ ಮುಂದುವರಿಯಲಿದೆ. ಸುವರ್ಣಸೌಧ ಗೇಟ್ ಮುಂದೆ ನಮ್ಮ ಟ್ರ್ಯಾಕ್ಟರ್ ನಿಲ್ಲಲಿವೆ. ಎಲ್ಲ ಲಿಂಗಾಯತ ಸಮುದಾಯವೂ ಹೋರಾಟ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಯಾವುದೇ ಬೇಡಿಕೆಗೆ ಸಮಯ ನಿಗದಿ ಮಾಡಿಲ್ಲ. ಬೇಡಿಕೆಗೆ ಯಾವುದೇ ಸಕಾರಾತ್ಮಕ ವಾಗಿ ಉತ್ತರ ನೀಡಿಲ್ಲ. ಚರ್ಚೆ ಚೆನ್ನಾಗಿಯೇ ಆಗಿತ್ತು, ಎರಡೂ ತಾಸು ಸಭೆ ನಡೆಸಿದರು. ಆದ್ರೆ ನಾವು ಅಂದುಕೊಂಡ ಹಾಗೆ ಸಮಯ ನಿಗದಿ ಮಾಡಲಿಲ್ಲ. ಕಳೆದ ಬಿಜೆಪಿ ಸರ್ಕಾರ ಇದ್ದಾಗಲೇ ಸಾಕಷ್ಟು ಹೋರಾಟ ಮಾಡಿದ್ವಿ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಇದ್ದಾಗ ಹೋರಾಟ ನಡೀತು. ಈಗ ಅದೇ ರೀತಿ ಈಗಲೂ ಮಾಡುತ್ತಿದ್ದೇವೆ. ಆದ್ರೆ ನಮ್ಮ ಬೇಡಿಕೆ ಯಾವುದೇ ರೀತಿ ಸ್ಪಂದಿಸಿಲ್ಲ. ಹೀಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.