ಮಾದಪ್ಪನ ಭಕ್ತರಿಗೆ ಸಿಹಿ ಸುದ್ಧಿ; ನಾಗಮಲೆ ಚಾರಣಕ್ಕೆ ವಿಧಿಸಿದ್ದ ನಿಷೇಧ ತೆರವು

ಚಾಮರಾಜನಗರ, ಅ.18: ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ನಾಗಮಲೆ ಚಾರಣಕ್ಕೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಆ ಮೂಲಕ ಮಲೆ ಮಾದೇಶ್ವರನ ಭಕ್ತರಿಗೆ ಅರಣ್ಯ ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಕಾಡು ಪ್ರಾಣಿಗಳು ದಾಳಿ ಹಿನ್ನೆಲೆ ಭಕ್ತರು ಚಾರಣಕ್ಕೆ ಹೋಗದಂತೆ 6 ತಿಂಗಳ ಹಿಂದೆಯೇ ಅರಣ್ಯ ಇಲಾಖೆ ನಿರ್ಬಂಧ ಹೇರಿತ್ತು.

ನಾಗಮಲೆ ಮಲೆ ಮಹದೇಶ್ವರ ಬೆಟ್ಟದಿಂದ 14 ಕಿ.ಮೀ. ದೂರದಲ್ಲಿದೆ. 14 ಕಿಲೋ ಮೀಟರ್ ಬರಿಗಾಲಿನಲ್ಲೇ ನಾಗಮಲೆಗೆ ಭಕ್ತರು ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಚಾರಣಕ್ಕೆ ನಿರ್ಬಂಧ ಹೇರಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು.

ಪ್ರತಿದಿನ 200 ಮಂದಿ ನಾಗಮಲೆಗೆ ಚಾರಣಕ್ಕೆ ಅವಕಾಶ

ಸದ್ಯ ನಾಗಮಲೆ ಚಾರಣಕ್ಕೆ ಇಲಾಖೆ ಅವಕಾಶ ನೀಡಿದೆ. ಆದರೆ ಆನ್​ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡು ತೆರಳಲು ಅವಕಾಶ ನೀಡಲಾಗಿದೆ. ಪ್ರತಿದಿನ 200 ಮಂದಿ ನಾಗಮಲೆಗೆ ಚಾರಣಕ್ಕೆ ಹೋಗಲು ಅವಕಾಶವಿದ್ದು, ಪ್ರತಿಯೊಬ್ಬರಿಗೆ 200 ರೂಪಾಯಿ ಶುಲ್ಕವನ್ನು ಅರಣ್ಯ ಇಲಾಖೆ ವಿಧಿಸಿದೆ.

ನಾಗಮಲೆಗೆ ಚಾರಣಕ್ಕೆ ಹೋಗುವ ಭಕ್ತಾಧಿಗಳು www.aranya.gov.kar ಸೈಟ್​ನಲ್ಲಿ ನೊಂದಾಯಿಸಿಕೊಂಡಿರಬೇಕು. ಅಥವಾ ಹೆಚ್ಚಿನ ಮಾಹಿತಿಗಾಗಿ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ಅರಣ್ಯಾಧಿಕಾರಿ: 9481995510, ಡಿಆರ್​ಎಫ್: 9481995527, ಪಾಲಾರ್ ಆರ್​​ಎಫ್: 9481995512, ಡಿಆರ್​ಎಫ್​ಒ: 9481995531, ಗಸ್ತು ಅರಣ್ಯಪಾಲಕ ಇಂಡಿಗನತ್ತ: 9481995597 ಅವರನ್ನು ಸಂಪರ್ಕ ಮಾಡುವಂತೆ ತಿಳಿಸಲಾಗಿದೆ.

ನಾಗಮಲೆ ಭಕ್ತರ ಪಾಲಿನ ಒಂದು ಧಾರ್ಮಿಕ ಕ್ಷೇತ್ರವೂ ಹೌದು, ಒಂದು ರೀತಿಯಲ್ಲಿ ಚಾರಣ ಪ್ರದೇಶವೂ ಹೌದು. ಮಹದೇಶ್ವರ ಬೆಟ್ಟದಿಂದ 15 ಕಿಲೋಮೀಟರ್ ದೂರ ಇರುವ ನಾಗಮಲೆಗೆ ಕಾಲ್ನಡಿಗೆಯಲ್ಲೇ ಬೆಟ್ಟವನ್ನು ಹತ್ತಿ, ಇಳಿದು ಹೋಗಬೇಕಾಗುತ್ತದೆ.