ಧಾರವಾಡ: ಹಾವನ್ನು ಕೊಂದಿದಕ್ಕೆ ಮತ್ತೊಂದು ಹಾವಿಂದ ಕಾಟ

ಧಾರವಾಡ, ಅ.16: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಹನುಮಂತ ಜಾಧವ ಎಂಬುವವರ ಹಿತ್ತಲಿನಲ್ಲಿ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ನಾಗರ ಪಂಚಮಿಯ ಮುನ್ನಾದಿನ ಇವರ ಹಿತ್ತಲಿನ ಇದೇ ಸ್ಥಳದಲ್ಲಿ ದೊಡ್ಡ ನಾಗರಹಾವೊಂದು ಕಂಡಿತ್ತು. ತುಂಬಾ ದಿನಗಳಿಂದ ಓಡಾಡಿಕೊಂಡಿದ್ದ ಈ ಹಾವು ಕಂಡ ತಕ್ಷಣವೇ ಅದನ್ನು ಹೊಡೆದು ಕೊಲ್ಲಲಾಗಿತ್ತು. ಅದಾದ ಒಂದು ವಾರದಲ್ಲಿ ಈ ಮನೆಯ 11 ವರ್ಷದ ಪೂಜಾ ಎಂಬ ಬಾಲಕಿಗೆ ಇದೇ ಹಿತ್ತಲಿನಲ್ಲಿ ನಾಗರಹಾವು ಕಾಣೋಕೆ ಶುರುವಾಗಿತ್ತು. ಆಕೆಗೆ ಮಾತ್ರವಲ್ಲ, ಅಕ್ಕಪಕ್ಕದ ಮನೆಗಳ ಮಕ್ಕಳಿಗೆ ಆ ಹಾವು ಕಂಡಿತ್ತು.

ಬಳಿಕ ಈ ಹಾವು ಹಿಂದೆ ಕೊಂದಿರೋ ನಾಗರ ಹಾವಿನ ಪತ್ನಿ. ಗಂಡನನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಬಂದಿದೆ. ನೀವು ದೇವಸ್ಥಾನ ಕಟ್ಟಿ ಎಂದು ಜನ ಹೇಳೋಕೆ ಶುರು ಮಾಡಿದ್ರು. ಅಲ್ಲದೆ ಮಕ್ಕಳು ಕೂಡ ಇದನ್ನೇ ಹೇಳುತ್ತಿದ್ದರು. ಹೀಗಾಗಿ ಮಕ್ಕಳ ಮೂಲಕವೇ ನಾಗದೇವತೆ ಈ ಮಾತನ್ನು ಹೇಳಿಸಿದ್ದಾಳೆಂದು ಒಂದೇ ರಾತ್ರಿಯಲ್ಲಿ ದೇವಸ್ಥಾನ ಕಟ್ಟಲಾಗಿದೆ.

Dharwad People built a temple for nagappa for killing snake kannada news

ಸುಟ್ಟರೂ ಸುಡದ ಹಾವು

ಇನ್ನು ಇಲ್ಲಿ ಅಚ್ಚರಿ ಎಂದರೆ ಸತ್ತ ಹಾವನ್ನು ದಹನ ಮಾಡಿದರೆ ಅದು ಸುಡಲೇ ಇಲ್ಲವಂತೆ. ಆಗಲೇ ಜನರಿಗೆ ಆತಂಕ ಶುರುವಾಗಿದೆ. ಅಲ್ಲದೇ ಮಕ್ಕಳಿಗೆ ಕಂಡ ಹಾವು ನಾಗದೇವತೆ ಅಂತಾನೇ ಇಲ್ಲಿನ ಜನ ನಂಬಿದ್ದಾರೆ. ಅಷ್ಟೇ ಅಲ್ಲ, ಹಾವು ನೋಡಿದ ಮಕ್ಕಳೊಂದಿಗೆ ಎಲ್ಲರೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಬಂದಿದ್ದಾರೆ. ಅಲ್ಲಿಯೂ ದೋಷ ಪರಿಹಾರಕ್ಕೆ ದೇವಸ್ಥಾನ ನಿರ್ಮಾಣದ ಸೂತ್ರವನ್ನೇ ಅರ್ಚಕರು ಹೇಳಿದ್ದಾರೆ. ಅಲ್ಲಿಂದ ಬಂದ ದಿನ ರಾತ್ರಿಯೇ ಗ್ರಾಮಸ್ಥರೆಲ್ಲ ಸೇರಿ, ದೇವಸ್ಥಾನ ಕಟ್ಟಿ, ಜೋಡಿ ನಾಗರ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇದು ದೇವರ ಸ್ವರೂಪ ಅಂತಾ ಹೇಳುತ್ತಿದ್ದು, ಸದ್ಯ ಜನ ತಂಡೋಪತಂಡವಾಗಿ ನೋಡೋಕೆ ಬರುತ್ತಿದ್ದಾರೆ. ಇನ್ನು ಮಕ್ಕಳಿಗೆ ಕಂಡ ಹಾವು ಇನ್ನೂವರೆಗೂ ದೊಡ್ಡವರಿಗೆ ಮಾತ್ರ ಕಂಡಿಲ್ಲವಂತೆ. ಹೀಗಾಗಿ ಇದು ದೇವರ ಪವಾಡ ಅಂತಾ ನಂಬಿರೋ ಸ್ಥಳೀಯರು ಈಗ ನಿರ್ಮಾಣವಾಗಿರೋ ದೇವಸ್ಥಾನಕ್ಕೆ ಕಳಸ ಸಹಿತ ಇನ್ನಿತರ ಅಭಿವೃದ್ಧಿ ಮಾಡೋಕೆ ಮುಂದಾಗಿದ್ದಾರೆ.