ಕಾರವಾರದಲ್ಲಿ ಮನೆಯಲ್ಲಿ ಒಬ್ಬರೇ ಇದ್ದಾಗ ಮೃತಪಟ್ಟ ಕಾಲೇಜು ಪ್ರಾಂಶುಪಾಲ- ಮೃತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಹೋದರ

ಕಾರವಾರ ಸೆ.30 : ಮನೆಯಲ್ಲಿ ಒಬ್ಬರೇ ಇದ್ದಾಗ ಕಾಲೇಜು ಪ್ರಾಂಶುಪಾಲರೊಬ್ಬರು ಹಣೆಯಲ್ಲಿನ ಗಂಭೀರ ಗಾಯದಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದು, ಈ ಸಾವಿನ ಬಗ್ಗೆ ಮೃತರ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೋರಿಭಾಗ ಕಿನ್ನರ ಮೂಲದ ಪ್ರಕಾಶ ವಿಶ್ವನಾಥ ಕಲ್ಲುಟಕರ (59) ಮೃತರು. ಮಲ್ಲಿಕಾರ್ಜುನ ಐಟಿಐ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಇವರು ಹಬ್ಬುವಾಡದ ಲಲಿತಾ ಅಪಾರ್ಟ್‌ಮೆಂಟ್‌ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಕುಡಿತದ ಚಟಗಾರರಾಗಿದ್ದ ಇವರು ರಾತ್ರಿ ಸಮಯದಲ್ಲಿ ಮನೆಯೊಳಗೆ ಇದ್ದಾಗ ಮನೆಯ ಬಾಗಿಲನ್ನು ಲಾಕ್ ಮಾಡದೆ ನಶೆಯಲ್ಲಿ ಇರುತ್ತಿದ್ದರು.

ಸೆ.28ರಂದು ಬೆಳಿಗ್ಗೆ 9ರ ಸುಮಾರಿಗೆ ಕಾಲೇಜಿನ ಜವಾನ್ ಲಲತಾ ಅಪಾರ್ಟಮೆಂಟನಲ್ಲಿ ಇವರಿಗೆ ಊಟ ಕೊಟ್ಟು ಹೋಗಿದ್ದರು. ಅದೇ ದಿನ ಮನೆಯ ಕೋಣೆಯಲ್ಲಿ ಮಲಗಿದ ವೇಳೆ ಸಾರಾಯಿ ಕುಡಿದ ನಶೆಯಲ್ಲಿ ಮಂಚದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದಾಗ ಪಕ್ಕದಲ್ಲಿದ್ದ ಪ್ರೈವುಡ್ ಕಟ್ಟಿಗೆ ಹಣೆಗೆ ಬಡಿದು ಗಂಭೀರ ಗಾಯಗೊಂಡಿದ್ದಾರೆ. ಮಲಗುವ ಕೋಣೆಯಿಂದ ಹಾಲ್‌ಗೆ ಸೋಫಾ ಮೇಲೆ ಕುಳಿತು, ಅಲ್ಲಿಂದ ಅಡುಗೆ ಕೋಣೆಗೆ ಹೋಗುವಾಗ ವಿಪರೀತ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿರುವ ಮೃತರ ಸಹೋದರ ಲಕ್ಷ್ಮೀಕಾಂತ ಮರಣದಲ್ಲಿ ಸಂಶಯ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಶಹರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ..