ಬೈಕ್‌ಗೆ ಲಾರಿ ಡಿಕ್ಕಿ; ಅಪಘಾತದ ರಭಸಕ್ಕೆ ಬೈಕ್‌ ಛಿದ್ರ ಛಿದ್ರ, ಸ್ಥಳದಲ್ಲೇ ಮೃತಪಟ್ಟ ಸವಾರ

ಆನೇಕಲ್: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು ಸಮೀಪದ ಸೂಳಗಿರಿ ಬಳಿ ಅಪಘಾತ ನಡೆದಿದೆ. ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ನಿವಾಸಿ ಅರ್ಚಕ ಶ್ರೀನಿವಾಸ್ ಮೃತ‌ ದುರ್ದೈವಿ.

ದೇವಾಲಯದ ಅರ್ಚಕರಾಗಿದ್ದ ಶ್ರೀನಿವಾಸ್, ಪೂಜಾ ನಿಮಿತ್ತ ಬೈಕ್‌ ಮೂಲಕ ಆನೇಕಲ್‌ನಿಂದ ಹೋಗುತ್ತಿದ್ದರು. ಈ ವೇಳೆ ಸೂಳಗಿರಿ ಹೆದ್ದಾರಿಯಲ್ಲಿ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶ್ರೀನಿವಾಸ್ ಸ್ಥಳದಲ್ಲಿಯೇ ಮೃತಪಟ್ಟರೆ, ರಾಘವೇಂದ್ರ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಬೈಕ್‌ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.