ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಅವರು, ದಾಖಲೆಯ 29 ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಶ್ಲಾಘಿಸಿದರು.
ಜೂಡೋದಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್ ಅವರು ಪ್ರಧಾನಿ ಮೋದಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಧಾನಿ ಮೋದಿ ಕಪಿಲ್‌ಗೆ ಆಟೋಗ್ರಾಫ್‌ನ್ನು ಸಹ ನೀಡಿದರು. ಇದೇ ವೇಳೆ ಅವನಿ ಲೆಖರಾ ಅವರು ಪ್ರಧಾನಿ ಮೋದಿಯವರಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೇ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಮಂಗಳವಾರ ದೇಶಕ್ಕೆ ಮರಳಿದ್ದ ಭಾರತೀಯ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆದ್ದಿದೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 19 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. ಈ ಸಾಧನೆಯ ಮೂಲಕ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದ ಭಾರತ 18 ನೇ ಸ್ಥಾನಕ್ಕೆ ಏರಿದೆ. ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್‌ಗೆ ತೆರಳಿತ್ತು.
ಕ್ರೀಡಾಪಟುಗಳ ಜೊತೆ ಮೋದಿ ಮಾತುಕತೆ ನಡೆಸಿದ ವೇಳೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಇದ್ದರು.