ಫ್ಲೈಓವರ್ ಕಾಮಗಾರಿ ವೇಳೆ ASI ತಲೆ ಮೇಲೆ ಬಿದ್ದ ರಾಡ್; ​​21 ಗಂಟೆ ಕಳೆದರೂ ಪ್ರಜ್ಞಾಹೀನ ಸ್ಥಿತಿ, 16 ಜನರ ವಿರುದ್ಧ ದೂರು

ಹುಬ್ಬಳ್ಳಿ, ಸೆ.11: ಫ್ಲೈಓವರ್ ಕಾಮಗಾರಿಯ ಸಂದರ್ಭದಲ್ಲಿ ರಾಡ್​​ ಬಿದ್ದು ಎಎಸ್​ಐ ಗಂಭೀರ ಗಾಯಗೊಂಡ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಫ್ಲೈ ಓವರ್​ ಕಾಮಗಾರಿಯ ಝಂಡು ಕನ್​ಸ್ಟ್ರಕ್ಷನ್​ ಎಂಡಿ ಸೇರಿ 16 ಜನರ ವಿರುದ್ಧ ದೂರು ದಾಖಲಾಗಿದೆ. ಮಹಾರಾಷ್ಟ್ರ ಮೂಲದ ಝಂಡು ಕನ್​ಸ್ಟ್ರಕ್ಷನ್ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಮಂಗಳವಾರ ಸಂಜೆ ರಾಡ್​ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ASI ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಾರೆ.

ಮಂಗಳವಾರ ಸಂಜೆ 4 ಗಂಟೆಗೆ ಕೋರ್ಟ್ ವೃತ್ತದಲ್ಲಿ ಫ್ಲೈ ಓವರ್​ ಕಾಮಗಾರಿಯ ಸಂದರ್ಭದಲ್ಲಿ ರಾಡ್​ ಬಿದ್ದು ಹುಬ್ಬಳ್ಳಿಯ ಉಪನಗರ ಠಾಣೆಯ ASI ನಾಭಿರಾಜ್ ದಯಣ್ಣವರವರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ನಾಭಿರಾಜ್​ಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ನಾಭಿರಾಜ್ ಇದ್ದಾರೆ. 48 ಗಂಟೆಗಳ ಕಾಲ ಏನೂ ಹೇಳೋಕೆ ಆಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ತಲೆಗೆ ಗಂಭೀರ ಗಾಯ ಹಿನ್ನೆಲೆ ನಾಭಿರಾಜ್ ದಯಣ್ಣವರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತಲೆಗೆ ಗಂಭೀರ ಗಾಯವಾಗಿದೆ, ಎಎಸ್ಐಗೆ ಇನ್ನೂ ಪ್ರಜ್ಞೆ ಬಂದಿಲ್ಲ. ವೈದ್ಯರು ASI ನಾಭಿರಾಜ್​ಗೆ ಎಲ್ಲ ರೀತಿಯ ಚಿಕಿತ್ಸೆ ನೀಡ್ತಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಕಮ್ಮಾರ್ ಮಾಹಿತಿ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಘಟನೆ ಸಂಬಂಧ ನಾಭಿರಾಜ್ ಸಂಬಂಧಿಕರು ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸುಮಾರು 320 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಸಂಬಂಧಿಕರ ದೂರಿನನ್ವಯ ಕಂಪನಿಯ ಎಂಡಿ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.