ಮೈಸೂರು, ಆಗಸ್ಟ್ 21: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜ ಪಯಣಕ್ಕೆ ಹುಣಸೂರು ತಾಲೂಕಿನ, ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಬುಧವಾರ ಚಾಲನೆ ದೊರೆಯಿತು. ಶುಭಮುಹೂರ್ತದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಪುಷ್ಪಾರ್ಚನೆ ನೆರವೇರಿತು. ಬೆಳಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಸಚಿವರಾದ ಮಹದೇವಪ್ಪ, ಈಶ್ವರ ಖಂಡ್ರೆ ಗಜಪಡೆಗೆ ಚಾಲನೆ ನೀಡಿದರು.
ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಿವೆ. ಕ್ಯಾಪ್ಟನ್ ಅಭಿಮನ್ಯು, ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ್, ಲಕ್ಷ್ಮೀ, ವರಲಕ್ಷ್ಮೀ, ಏಕಲವ್ಯ ಆನೆಗಳು ಆಗಮಿಸಿವೆ.
ಸಂಸದ ಸುನಿಲ್ ಬೋಸ್, ಶಾಸಕರಾದ ಜಿಡಿ ಹರೀಶ್ ಗೌಡ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಎಂಎಲ್ಸಿ ವಿವೇಕಾನಂದ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಯದುವೀರ್ ಒಡೆಯರ್ ಗೈರಾಗಿದ್ದರು.
ಇಂದು, ನಾಳೆ ಅಶೋಕಪುರಂ ಅರಣ್ಯ ಭವನ ಆವರಣದಲ್ಲಿ ಆನೆಗಳು ವಾಸ್ತವ್ಯ ಹೂಡಲಿವೆ. ಶುಕ್ರವಾರ ಗಜಪಡೆ ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ. ಆನೆಗಳು, ಮಾವುತರ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಗುರುತಿಸಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳಲು ಒಟ್ಟು ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸುತ್ತಿವೆ. ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಮಧ್ಯೆ, ನಾಲ್ಕು ಮೀಸಲು ಆನೆಗಳು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಮಾಡಿಸಲಾಗಿದೆ. ಅರಣ್ಯಧಿಕಾರಿಗಳು, ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷದಂತೆ 50 ಜನರಿಗೆ 1 ಕೋಟಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.