ಸಣ್‌ ಮಳೆಗೆ ಕೆರೆಯಂತಾದ ಬೆಂಗಳೂರಿನ ರಸ್ತೆಗಳು; ನಾಳೆಗೂ ಅಲರ್ಟ್‌

ಬೆಂಗಳೂರು: ಸೋಮವಾರ ರಾಜಧಾನಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಕೇವಲ10-15 ನಿಮಿಷ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಹೆಬ್ಬಾಳದ ರಸ್ತೆಗಳು ಕೆರೆಯಂತಾಗಿ ಸವಾರರು, ಸಾರ್ವಜನಿಕರು ಹೈರಣಾದರು. ಇತ್ತ ಮಳೆ ಕಡಿಮೆಯಾಗುತ್ತಿದ್ದಂತೆ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿದ್ದರು.

ಯಶವಂತಪುರ, ಹೆಬ್ಬಾಳ ಅಂಡರ್ ಪಾಸ್‌ನಲ್ಲಿ ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು. ಟ್ರಾಫಿಕ್ ಕ್ಲಿಯರ್ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಹೆಬ್ಬಾಳ ಸಂಪರ್ಕ ಕಲ್ಪಿಸುವ ಅಕ್ಕಪಕ್ಕದ ರಸ್ತೆಗಳು, ವಸಂತನಗರ, ರೈಲ್ವೆ ಪ್ಯಾರಲಲ್ ರಸ್ತೆ, ಪ್ಯಾಲೇಸ್ ಗುಟ್ಟಳ್ಳಿ ಸೇರಿದಂತೆ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು

ಇತ್ತ ದೊಡ್ಡಬಳ್ಳಾಪುರದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಯ ಮೇಲೆ ನೀರು ತುಂಬಿ ಹರಿದಿತ್ತು. ದೊಡ್ಡಬಳ್ಳಾಪುರದ ತಾಲೂಕು ಕಚೇರಿ, ತೇರಿನ ಬೀದಿ ಸರ್ಕಲ್ ಬಳಿ ವಾಹನ ಸವಾರರು ಪರದಾಡಿದರು. ಒಂದು ಅಡಿಗೂ‌ ಹೆಚ್ಚು ನೀರು ನಿಂತು, ಜತೆಗೆ ಚರಂಡಿ ನೀರೆಲ್ಲಾ ತುಂಬಿ ರಸ್ತೆಯ ಮೇಲೆ ಹರಿದಿತ್ತು. ತಾಲೂಕು ಕಚೇರಿಯ ಮುಂದೆಯೇ ರಸ್ತೆ ಅವ್ಯವಸ್ಥೆಗೊಂಡಿತ್ತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡಿದರು.