ಬೆಂಗಳೂರು, ಆಗಸ್ಟ್ 17: ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಮೊದಲ ಬಾರಿಗೆ ಕಾನೂನು ಸಂಕೋಲೆಯಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಕಾನೂನು ಸಮರ ಕೂಡ ಸಾರಿದ್ದಾರೆ. ಯಾವ್ಯಾವ ಸೆಕ್ಷನ್ಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7: ಅಧಿಕಾರ ದುರ್ಬಳಕೆ ಮಾಡಿಕೊಂಡು ಅನುಚಿತ ಲಾಭ ಪಡೆಯುವುದು ಕನಿಷ್ಟ 3 ವರ್ಷದಿಂದ ಗರಿಷ್ಟ 7 ವರ್ಷ ಶಿಕ್ಷೆ ಇದೆ. ಸೆಕ್ಷನ್ 9: ವಾಣಿಜ್ಯ ಸಂಸ್ಥೆಗೆ ಅನುಚಿತ ಅನುಕೂಲ ಮಾಡಿಕೊಡುವುದು ಅಪರಾಧ. ಸೆಕ್ಷನ್ 11: ಸರ್ಕಾರಿ ಸೇವಕ ತನ್ನ ಕಾರ್ಯಕ್ಕೆ ಅನುಚಿತ ಲಾಭ ಪಡೆಯುವುದು ಕನಿಷ್ಟ 6 ತಿಂಗಳಿನಿಂದ ಗರಿಷ್ಟ 5 ವರ್ಷ ಶಿಕ್ಷೆಗೆ ಅವಕಾಶವಿದೆ.
ಸೆಕ್ಷನ್ 12: ಭ್ರಷ್ಟಾಚಾರ ತಡೆ ಕಾಯ್ದೆಯ ಯಾವುದೇ ಅಪರಾಧಕ್ಕೆ ಪ್ರಚೋದನೆ ನೀಡುವುದು. ಕನಿಷ್ಟ 3 ವರ್ಷಗಳಿಂದ ಗರಿಷ್ಟ 7 ವರ್ಷಗಳವರೆಗೆ ಶಿಕ್ಷೆ. ಸೆಕ್ಷನ್ 15: ತಮ್ಮ ಅಧಿಕಾರವ್ಯಾಪ್ತಿಯನ್ನು ದುರ್ಬಳಕೆ ಮಾಡಿ ತಮಗಾಗಲಿ ಅಥವಾ ತಮಗೆ ಬೇಕಾದವರಿಗಾಗಲೀ ಅಕ್ರಮ ಲಾಭ ಮಾಡಿಕೊಡಲು ಯತ್ನಿಸುವುದು. ಕನಿಷ್ಟ 2 ವರ್ಷಗಳಿಂದ ಗರಿಷ್ಟ 5 ವರ್ಷಗಳವರೆಗೆ ಶಿಕ್ಷೆ ಇದೆ.
ಬಿಎನ್ಎಸ್ ಕಾಯ್ದೆ ಸೆಕ್ಷನ್ 59: ಒಂದು ಕೃತ್ಯವನ್ನು ತಡೆಯಬೇಕಾದ ಜವಾಬ್ದಾರಿಯುಳ್ಳ ಸರ್ಕಾರಿ ಸೇವಕ ಆ ಕೃತ್ಯವನ್ನು ತಡೆಯದೇ ಅದನ್ನು ಮುಚ್ಚಿಡುವುದು, ಮೂಲ ಅಪರಾಧದ ಅರ್ಧದಷ್ಟು ಶಿಕ್ಷೆ ಇದೆ. ಸೆಕ್ಷನ್ 61: ಅಕ್ರಮ ನಡೆಸಲು ಒಳಸಂಚು ರೂಪಿಸುವುದು, ಮೂಲ ಅಪರಾಧದಷ್ಟೇ ಶಿಕ್ಷೆ ಇದೆ. ಸೆಕ್ಷನ್ 62: ಜೈಲು ಶಿಕ್ಷೆಗೆ ಅವಕಾಶ ಇರುವಂತಹ ಅಪರಾಧಗಳನ್ನು ಮಾಡಲು ಪ್ರಯತ್ನಿಸುವುದು, ಮೂಲ ಅಪರಾಧದ ಅರ್ಧದಷ್ಟು ಶಿಕ್ಷೆ ವಿಧಿಸಲಾಗುತ್ತದೆ.
ಸೆಕ್ಷನ್ 201: ದಾಖಲೆ ತಯಾರಿಸುವ ಜವಾಬ್ದಾರಿಯುಳ್ಳ ಸರ್ಕಾರಿ ಸೇವಕ ಮತ್ತೊಬ್ಬನಿಗೆ ಹಾನಿಯಾಗುವಂತಹ ತಪ್ಪು ದಾಖಲೆ ಸೃಷ್ಟಿಸುವುದು. 3 ವರ್ಷಗಳವರೆಗೆ ಶಿಕ್ಷೆ ಇದೆ. ಸೆಕ್ಷನ್ 227: ಸತ್ಯ ಹೇಳುವ ಪ್ರಮಾಣ ಸ್ವೀಕರಿಸಿದ ಸರ್ಕಾರಿ ಸೇವಕ ಸುಳ್ಳು ಮಾಹಿತಿ ನೀಡುವುದು. ಸೆಕ್ಷನ್ 228: ಸುಳ್ಳು ಸಾಕ್ಷ್ಯ ಸೃಷ್ಟಿಸುವುದು. ಸೆಕ್ಷನ್ 229: ಉದ್ದೇಶಪೂರ್ವಕ ಸುಳ್ಳು ದಾಖಲೆ ಸೃಷ್ಟಿಗೆ 3 ವರ್ಷಗಳವರೆಗೆ ಶಿಕ್ಷೆ ನೀಡಲಾಗುತ್ತದೆ.
ಸೆಕ್ಷನ್ 239: ಒಂದು ಕೃತ್ಯ ನಡೆದಿದೆ ಎಂದು ತಿಳಿದ ನಂತರವೂ ಅದರ ಮಾಹಿತಿ ನೀಡದೇ ಮುಚ್ಚಿಡುವುದು ಅಪರಾಧ 6 ತಿಂಗಳವರೆಗೆ ಶಿಕ್ಷೆ ಇದೆ. 314: ಚರಾಸ್ತಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರೆ 2 ವರ್ಷಗಳವರೆಗೆ ಶಿಕ್ಷೆ. 316(5): ಸರ್ಕಾರಿ ಸೇವಕನಿಗೆ ಒಂದು ಆಸ್ತಿಯ ಜವಾಬ್ದಾರಿ ನೀಡಿದಾಗ ಅದನ್ನು ದುರುಪಯೋಗಪಡಿಸಿ ನಂಬಿಕೆ ದ್ರೋಹ ಮಾಡುವುದು 10 ವರ್ಷಗಳವರೆಗೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದು.