ಮಂಡ್ಯ, ಆಗಸ್ಟ್ 11: ಮಳವಳ್ಳಿ ತಾಲೂಕಿನ ಚಿಕ್ಕಮಲಗೂಡು ಗ್ರಾಮದಲ್ಲಿ ರೌಡಿಶೀಟರ್ ಮುತ್ತುರಾಜು ಅಲಿಯಾಸ್ ಡಕ್ಕ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮುತ್ತುರಾಜನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸ್ ಪೇದೆ ಸಿದ್ದರಾಜು ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಮುತ್ತುರಾಜ್ನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ರೌಡಿಶೀಟರ್ ಮುತ್ತುರಾಜು ಅನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದಾರೆ.
ಪ್ರಕರಣ ಸಂಬಂಧ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾತನಾಡಿ, ಫೈರಿಂಗ್ ನಡೆಸಿ ಆರೋಪಿ ಡಕ್ಕನನ್ನು ಬಂಧಿಸಲಾಗಿದೆ. ಮುತ್ತುರಾಜು ಅಲಿಯಾಸ್ ಡಕ್ಕ, ಕಾಂತರಾಜು ಎಂಬುವರ ಕೊಲೆ ಪ್ರಕರಣ ಆರೋಪಿಯಾಗಿದ್ದಾನೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಸಿಪಿಐ ಶ್ರೀಧರ್ ತನಿಖೆ ನಡೆಸುತ್ತಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಾಂತರಾಜುಗೆ ಕೊಲೆಗೆ ಮುತ್ತುರಾಜ ಅಲಿಯಾಸ್ ಡಕ್ಕ ಸುಪಾರಿ ನೀಡಿದ್ದು ಬಹಿರಂಗವಾಗಿದೆ.
ಚಿಕ್ಕಮಲಗೂಡು ಬಳಿ ರೌಡಿಶೀಟರ್ ಮುತ್ತುರಾಜು ಇರುವ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಹಿಡಿಯಲು ಹೋಗಿದ್ದ ವೇಳೆ ಮುತ್ತುರಾಜ ಕಾನ್ಸ್ಟೇಬಲ್ ಮೇಲೆ ಡ್ಯಾಗರ್ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ಶ್ರೀಧರ್ ಆರೋಪಿ ಡಕ್ಕ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿಸಿದರು.
ಮುತ್ತುರಾಜ ಅಲಿಯಾಸ್ ಡಕ್ಕ 11 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮೂರು ಕೊಲೆ, ಮೂರು ಕೊಲೆಗೆ ಯತ್ನ, ಎರಡು ರಾಬರಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಹುಡುಗರ ಗುಂಪು ಕಟ್ಟಿಕೊಂಡು ರೌಡಿ ಚಟುವಟಿಕೆಗಳಲ್ಲಿ ಡಕ್ಕ ಭಾಗಿಯಾಗಿದ್ದಾನೆ. 2019ರಿಂದ ರೌಡಿ ಕೃತ್ಯಗಳ ಮೂಲಕ ಹವಾ ಮೇಂಟೇನ್ ಮಾಡುತ್ತಿದ್ದನು. ಆರೋಪಿ ಮುತ್ತುರಾಜ ಅಲಿಯಾಸ್ ಡಕ್ಕ ಇಸ್ಪೀಟ್ ದಂಧೆ ಕೂಡ ನಡೆಸುತ್ತಿದ್ದನು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಡಕ್ಕ ಗ್ಯಾಂಗ್ಗೂ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದರು.