ವಿರೋಧದ ನಡುವೆಯೂ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ಮಂಡ್ಯ ಜಿಲ್ಲಾಡಳಿತ ಸಿದ್ಧ

ಮಂಡ್ಯ, ಜುಲೈ 4: ಸಾಕಷ್ಟು ವಿರೋಧದ ನಡುವೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ವಿವಾದಿತ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​​ಗೆ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಬೇಬಿಬೆಟ್ಟದಲ್ಲಿ ಐದು ಕಡೆಗಳಲ್ಲಿ ಕುಳಿಗಳನ್ನು ಕೊರೆದು ಇನ್ನು ಎರಡು ಮೂರು ದಿನಗಳಲ್ಲಿ ಪರಿಕ್ಷಾರ್ಥ ಸ್ಫೋಟ ಕೂಡ ನಡೆಯಲಿದೆ. ಇದಕ್ಕೆ ರೈತರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​​ಎಸ್ ಜಲಾಶಯ ಹಳೇ ಮೈಸೂರು ಭಾಗದ ರೈತರ ಜೀವನಾಡಿ. ಅಷ್ಟೇ ಅಲ್ಲದೆ ಮಂಡ್ಯ, ಮೈಸೂರು, ಬೆಂಗಳೂರು ನಗರದ ಜನರ ನೀರಿನ ದಾಹವನ್ನ ತಣಿಸುವ ಡ್ಯಾಂ. ಈ ಜಲಾಶಯಕ್ಕೆ ಅಪಾಯ ಎದುರಾಗುತ್ತದೆ ಎಂದು ಬೇಬಿ ಬೆಟ್ಟದಲ್ಲಿ ಗಣಿಗಾರಿಯನ್ನ ಈ ಹಿಂದೆ ಹೈಕೋರ್ಟ್ ಸೂಚನೆ ಮೇರೆಗೆ ಸ್ಥಗಿತ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ವಿವಾದಿತ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ.

ಈ ಮಧ್ಯೆ ಕೆಲ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಟ್ರಯಲ್ ಬ್ಲಾಸ್ಟ್ ನಡೆಸಿ, ಜಲಾಶಯಕ್ಕೆ ಅಪಾಯ ಎದುರಾಗುತ್ತದೆಯೇ ಅಥವಾ ಇಲ್ಲವೇ, ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಮಂಡ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಾಕಷ್ಟು ವಿರೋಧದ ನಡುವೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಕಾವೇರಿ ನೀರಾವರಿ ನಿಗಮ ಹಾಗೂ ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬೇಬಿಬೆಟ್ಟದಲ್ಲಿ ಮಷಿನ್​ಗಳ ಮೂಲಕ ಆಯ್ದ ಐದು ಸ್ಥಳಗಳಲ್ಲಿ ಕುಳಿಗಳನ್ನು ಸಹಾ ಕೊರೆಸಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಜಾರ್ಖಂಡ್ ಮೂಲದ ತಜ್ಞರನ್ನ ಕರೆಸಿ ಟ್ರಯಲ್ ಬ್ಲಾಸ್ಟ್ ಕೂಡ ನಡೆಸಲಾಗುತ್ತದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರೇಷ್ಮಾ ಮಾಹಿತಿ ನೀಡಿದ್ದಾರೆ.

2018ರಲ್ಲಿ ಬಾರಿ ಬೇಬಿಬೆಟ್ಟದಲ್ಲಿ ಸ್ಫೋಟ ನಡೆಸಲಾಗಿತ್ತು. ಆಗ, ಜಲಾಶಯಕ್ಕೆ ಅಪಾಯ ಎದುರಾಗುತ್ತದೆ ಎಂದು ಬ್ಲಾಸ್ಟ್ ವಿರೋಧಿಸಿ ಹೋರಾಟ ಕೂಡ ನಡೆಸಲಾಗಿತ್ತು. ಗಣಿಗಾರಿಕೆಯನ್ನ ಕೂಡ ಈ ಹಿಂದೆ ಬಿಜೆಪಿ ಸರ್ಕಾರ ಸ್ಥಗಿತ ಮಾಡಿತ್ತು.

ಕೇವಲ 5 ಕಿಮೀ ದೂರದಲ್ಲಿದೆ ಕೆಆರ್​ಎಸ್ ಡ್ಯಾಂ

ಬೇಬಿಬೆಟ್ಟದಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿ ಕೆಆರ್​ಎಸ್ ಜಲಾಶಯವಿದೆ. ಒಂದು ವೇಳೆ ಇಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದರೂ, ಜಲಾಶಯಕ್ಕೆ ಅಪಾಯ ಎದುರಾಗಲಿದೆ. ನಂತರ ಟ್ರಯಲ್ ಬ್ಲಾಸ್ಟ್ ನಡೆಸಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಿದರೆ, ಅಣೆಕಟ್ಟೆಗೆ ಹಾನಿ ಉಂಟಾಗಲಿದೆ. ಭಾರಿ ಸ್ಫೋಟಕ ಬಳಸಿ ಬಂಡೆಗಳನ್ನು ಸಿಡಿಸಿದರೆ ಕಣ್ಣಳತೆ ದೂರದಲ್ಲಿ ಇರುವ ಡ್ಯಾಂ ರಚನೆಗೆ ಕೂಡ ಹಾನಿ ಆಗಲಿದೆ. ಇದರಿಂದ ಜಲಾಶಯವನ್ನೇ ಲಕ್ಷಾಂತರ ರೈತರಿಗೆ ತೊಂದರೆ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಪರೀಕ್ಷಾರ್ಥ ಸ್ಪೋಟವೇ ಬೇಡ ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ.

ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಜಿಲ್ಲಾಡಳಿತ ತೆಗೆದುಕೊಳ್ಳುವ ನಿಲುವಿಗೆ ನಾವು ಬದ್ಧ. ಟ್ರಯಲ್ ಬ್ಲಾಸ್ಟ್ ಬಗ್ಗೆ ನಾನು ವಿಶ್ಲೇಷಣೆ ಮಾಡಲ್ಲ ಎಂದಿದ್ದಾರೆ.

ಒಟ್ಟಾರೆ ಸಾಕಷ್ಟು ವಿರೋಧದ ನಡುವೆ ವಿವಾದಿತ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​​ಗೆ ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.