‘ವಿದ್ಯೆ ಎಂಬ ಎರಡಕ್ಷರವು ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ’. ಪ್ರತಿ ವ್ಯಕ್ತಿಯು ಸಮಾಜದಿಂದ ಎಲ್ಲವನ್ನು ಪಡೆದುಕೊಂಡು ಬೆಳೆಯುತ್ತಾನೆ. ಕೊನೆಯಲ್ಲಿ ಅದನ್ನು ತಿರುಗಿ ಸಮಾಜಕ್ಕೆ ತನ್ನ ಕಾರ್ಯದಿಂದ ಧಾರೆಯೆರೆಯುತ್ತಾನೆ. ಇದು ಜಗದ ನಿಯಮ. ಅಂತೆಯೇ ವಿದ್ಯಾ ನಾಯಕರವರು ಕೂಡ ತಮ್ಮ ಸಾರ್ಥಕ ಶೈಕ್ಷಣಿಕ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸುವ ಜೊತೆಗೆ ಅವರ ಮೆಚ್ಚುಗೆಗೆ, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಳೆದ 39 ವರ್ಷ 3 ತಿಂಗಳುಗಳ ಸುದೀರ್ಘ ಮತ್ತು ಸಾರ್ಥಕ ಶೈಕ್ಷಣಿಕ ಸೇವೆ ನೀಡಿ ದಿನಾಂಕ 31- 7- 2024 ರಂದು ಸ.ಹಿ.ಪ್ರಾ ಶಾಲೆ ಹೊಸ್ಕೇರಿ ಕಡಿಮೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಶ್ರೀಮತಿ ವಿದ್ಯಾ ನಾಯಕ ರವರು ಹೆಸರೇ ಹೇಳುವಂತೆ ಅವರು ವಿದ್ಯಾದಾನ ಮಾಡಿ ಸಾವಿರಾರು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಕಾರಣಿಕರ್ತರಾಗಿದ್ದಾರೆ. ವಿದ್ಯೆ ಎಂಬ ಪದಕ್ಕೆ ಆದರ್ಶಪ್ರಾಯರಾಗಿದ್ದಾರೆ. ನಿವೃತ್ತಿ ಹೊಂದಿದರು ಕೂಡ ಇನ್ನೂ ಬೇಕೆನ್ನುವಷ್ಟು ಶಿಸ್ತು, ಸಂಯಮದಿಂದ ಕೂಡಿದ ಸಮಯ ಪ್ರಜ್ಞೆಯುಳ್ಳ ಸಾರ್ಥಕ ಸೇವೆ ಇವರದ್ದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ 01-06-1985 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಟಗಾರದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ನಂತರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕಲವತ್ತಿ ಹಾಗೂ ಸ.ಹಿ.ಪ್ರಾ ಶಾಲೆ ಕಪ್ಪನಹಳ್ಳಿ ನಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಬ್ಬೂರಿನಲ್ಲಿ ಸೇವೆ ಸಲ್ಲಿಸಿ ಬಳಿಕ ಪದೋನ್ನತ ಮುಖ್ಯ ಶಿಕ್ಷಕಿಯಾಗಿ ಸ.ಹಿ.ಪ್ರಾ ಶಾಲೆ ಚೌಡಿಹಳ್ಳಿ ಹಾಗೂ ಸ.ಹಿ.ಪ್ರಾ ಶಾಲೆ ಬೆಂಡೆಕಟ್ಟೆಯಲ್ಲಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ನಂತರ ತನ್ನ ತವರು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡ ಇವರು ಸ.ಹಿ.ಪ್ರಾ ಶಾಲೆ, ಹೊಸ್ಕೇರಿ ಕಡಿಮೆ ಯಲ್ಲಿ ಪದೋನ್ನತ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುತ್ತಾರೆ.
ಪ್ರಸ್ತುತ ಕುಮಟಾ ತಾಲೂಕಿನ ಪಡುವಣಿ ಗ್ರಾಮದಲ್ಲಿ ವಾಸಿಸುತ್ತಿರುವ ಶ್ರೀಮತಿ ವಿದ್ಯಾ ನಾಯಕರದು ಸುಶಿಕ್ಷಿತ ಮಾದರಿ ಕುಟುಂಬ. ಇವರ ಪತಿ ತಿಮ್ಮಣ್ಣ ಸುಬ್ರಾಯ ಗಾಂವಕರ ನಿವೃತ್ತ ಶಿಕ್ಷಕರು. ಮುದ್ದಿನ ಮಗ ಪ್ರೇರಿತ ಮತ್ತು ಸೊಸೆ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಮಗಳು ಪಲ್ಲವಿ ಶಿಕ್ಷಕಿಯಾಗಿ ಮುಂಬಯಿ ಯಲ್ಲಿ ತನ್ನ ಕುಟುಂಬದೊಂದಿಗೆ ಸೇವೆ ಸಲ್ಲಿಸುತ್ತಿದ್ದಾಳೆ.
ನಿಷ್ಕಲ್ಮಶ,ನಿರ್ಮಲ ಮನಸ್ಸಿನ ಗುಣವೇ ನಿಮಗೆ ಭೂಷಣವಾಗಿದೆ. ನಿಮ್ಮ ನಿವೃತ್ತಿಯ ಜೀವನದಲ್ಲಿ ಸದಾ ಆರೋಗ್ಯ, ನೆಮ್ಮದಿ, ಮತ್ತು ಐಶ್ವರ್ಯವನ್ನು ಭಗವಂತ ದಯಪಾಲಿಸಲಿ. ಆರೋಗ್ಯ ಪೂರ್ಣ ಬದುಕು ನಿಮ್ಮದಾಗಲಿ ಎಂಬುದೇ ಎಲ್ಲರ ಶುಭ ಹಾರೈಕೆಯಾಗಿದೆ.
ವೈಶಾಲಿ ರಾಮು ಹಿರೇಗುತ್ತಿ