ಮಳೆಗಾಗಿ ದೇವರ ಮೊರೆ ಹೋದ ಜನ; ಧಾರ್ಮಿಕ ಆಚರಣೆಗಳ ಮೂಲಕ ಪ್ರಾರ್ಥನೆ

ಕೊಪ್ಪಳ, ಆಗಸ್ಟ್.01: ರಾಜ್ಯದ ಹಲವಡೆ ಮಳೆ ಆರ್ಭಟ ಜೋರಾಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಮುಳುಗಿ, ಜಲಾಶಯಗಳು ತುಂಬಿ ಹರಿಯುತ್ತಿದೆ. ಪ್ರಕೃತಿ ಜೀವ ಕಳೆ ಪಡೆದಿದೆ. ಗುಡ್ಡ ಕುಸಿದು ಹಲವೆಡೆ ಪ್ರಾಣಗಳು ಹೋಗಿವೆ. ಆದರೆ ನಮ್ಮದೇ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ತೀರ್ವವಾಗಿದೆ. ಹೀಗಾಗಿ ಜಿಲ್ಲೆಯ ಹಲವಡೆ ಜನರು ಮಳೆಗಾಗಿ ದೇವರ ಮೊರೆ ಹೋಗಿದ್ದು, ಅನೇಕ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಮಸ್ಥರು ದುರ್ಗಾದೇವಿ ದೇವಸ್ಥಾನದಲ್ಲಿ ಮಳೆಯ ಆಗಮನಕ್ಕಾಗಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಒಂದು ಕಡೆ ಪ್ರವಾಹ, ಇನ್ನೂಂದು ಕಡೆ ಜಲಾಶಯಗಳು ತುಂಬಿ ಹರಿಯುತ್ತಿದ್ದರೆ, ಕೊಪ್ಪಳ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬೆಳೆಗಳು ಬಾಡುತ್ತಿವೆ. ಹೀಗಾಗಿ ಮಳೆಗಾಗಿ ಗ್ರಾಮಸ್ಥರು ಹಾಗೂ ಮಕ್ಕಳು ಸೇರಿಕೊಂಡು ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪೂಜೆ ನಂತರ ದೇವಸ್ಥಾನದ ಬಂಡೆಯ ಮೇಲೆ ವಿಶೇಷ ಆಚರಣೆಯೊಂದು ನಡೆಯಿತು. ಬಂಡೆಯ ಮೇಲೆ ಜೋಳ ಹಾಕಿ ಅದನ್ನು ಹೂಗಳಿಂದ ಅಲಂಕರಿಸಿ ಬಳಿಕ ನೀರು ತುಂಬಿದ ಬಿಂದಿಗೆ ಇಟ್ಟು ಅದನ್ನು ತಿರುಗಿಸಲಾಗುತ್ತೆ. ತಿರುಗಿದಾಗ ಬೀಳುವ ನೀರಿನಿಂದ ಯಾವ ಯಾವ ಕಡೆ ಮಳೆ ಎಷ್ಟು ಪ್ರಮಾಣದಲ್ಲಿ ಬರುತ್ತದೆ ಎಂಬುದನ್ನು ತಿಳಿಸಲಾಗುತ್ತೆ.

ಮಣ್ಣಿನ ಬಿಂದಿಗೆ ಜೋರಾಗಿ ತಿರುಗಿದರೆ ಮಳೆಯು ಜೋರಾಗಿ ಬರುವುದು, ನಿಧಾನವಾಗಿ ತಿರುಗಿದರೆ ಕಡಿಮೆ ಮಳೆ ಬರುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಇನ್ನುಳಿದ ಆಶ್ಲೇಷ, ಉತ್ತರಿ ಮಳೆ, ಹಸ್ತ, ಚಿತ್ತ, ಸ್ವಾತಿ ಹಾಗೂ ಇನ್ನುಳಿದ ಮಳೆಯು ಚೆನ್ನಾಗಿ ಬರುವ ನಿರೀಕ್ಷೆ ಕಂಡು ಬಂದಿದೆ ಅಂತ ಜನರು ಧಾರ್ಮಿಕ ಆಚರಣೆ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಾದ ನಂತರ ಮಹಿಳೆಯರು ಮನೆ ಮನೆಗಳಿಗೆ ಹೋಗಿ ಗುರಜಿ, ಗುರಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ಸುತ್ತಾಡಿ ಬಂದೆ, ಬಾರೋ ಮಳೆಯೇ ಕಪಾಟ ಮಳೆಯೇ ಎಂಬ ಹಾಡನ್ನು ಹಾಡುವ ಮೂಲಕ ಮಹಿಳೆಯರು ಮತ್ತು ಪುರುಷರು ರೈತಾಪಿ ವರ್ಗದವರು ವರುಣ ದೇವರನ್ನು ಪ್ರಾರ್ಥಿಸಿದರು.