ವಿಜಯನಗರ/ಕೊಪ್ಪಳ, (ಜುಲೈ 07): ತುಂಗಭದ್ರಾ ಜಲಾಶಯ ಆಂಧ್ರ ಪ್ರದೇಶ ಸೇರಿದಂತೆ ಕರ್ನಾಟಕದ ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜನರ ಜೀವನಾಡಿಯಾಗಿದೆ. ಬೇಸಿಗೆಯಲ್ಲಿ ಡೆಡ್ ಸ್ಟೋರೇಜ್ಗೆ ಇಳಿದಿದ್ದ ತುಂಗಭದ್ರೆಗೆ ಇದೀಗ ಜೀವ ಕಳೆಬಂದಿದೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗುತ್ತಿದೆ. ಸದ್ಯ ತುಂಗಭದ್ರಾ ಜಲಾಶಯಕ್ಕೆ 50971 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ 13.591 ಟಿಎಂಸಿ ಇದ್ದ ನೀರು ಇಂದು ಏಕಾಏಕಿ ಡ್ಯಾಂನಲ್ಲಿ 17.912 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಮೂಲಕ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 4 ಟಿಎಂಸಿ ನೀರು ಸಂಗ್ರಹವಾಗಿರುವುದು ವಿಶೇಷ.
24 ಗಂಟೆಗಳಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ ಜಲಾಶಯಕ್ಕೆ 50971 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗಭದ್ರಾ ಒಟ್ಟು 105.79 ಟಿಎಂಸಿ ನೀರು ಸಾಮಾರ್ಥ್ಯ ಹೊಂದಿದ್ದು, ಶನಿವಾರ 13.90 ಟಿಎಂಸಿ ಇದ್ದ ನೀರಿನ ಸಂಗ್ರಹ ಇಂದು 17.912 ಟಿಎಂಸಿಗೆ ಏರಿಕೆಯಾಗಿದೆ. ಇನ್ನು ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜಲಾಶಯ ಬೇಗ ಭರ್ತಿಯಾಗಬಹುದೆಂದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಇದೇ ರೀತಿ ನೀರಿನ ಒಳ ಹರಿವು ಬಂದರೆ ಈ ವಾರದಲ್ಲೇ ಜಲಾಶಯ ಬಹುತೇಕ ಭರ್ತಿಯಾಗಲಿದೆ. ತುಂಗಭದ್ರಾ ಜಲಾಶಯ ತುಂಬಿದ್ರೆ 4 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಆಂಧ್ರ ಪ್ರದೇಶದ ರೈತರಿಗೂ ಜೀವನಾಡಿಯಾಗಿದೆ. ಕೇವಲ ತುಗಂಭದ್ರಾ ಜಲಾಶಯದ ನೀರನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗುತ್ತಿಲ್ಲ. ನಾಲ್ಕು ಜಿಲ್ಲೆಗಳ ಕುಡಿಯಲು ಬಳಕೆ ಮಾಡಲಾಗುತ್ತದೆ.