ಶಿರೂರು ಗುಡ್ಡ ಕುಸಿತ: ಮತ್ತೋರ್ವ ಚಾಲಕ ನಾಪತ್ತೆ, ಹುಡುಕಿಕೊಂಡು ಘಟನಾ ಸ್ಥಳಕ್ಕೆ ಬಂದ ಕುಟುಂಬ

ಉತ್ತರ ಕನ್ನಡ, ಜು.25: ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ನಡೆದು ಇಂದಿಗೆ 10 ದಿನಗಳು ಕಳೆದಿದ್ದು, 8 ಜನರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.  ಜೊತೆಗೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ  ಗಂಗಾವಳಿ ನದಿಯಲ್ಲಿ ಇರುವುದು ನಿನ್ನೆ ಖಚಿತವಾಗಿದ್ದು, ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಆದರೆ, ಇದೀಗ ಘಟನೆಯಲ್ಲಿ ಮತ್ತೋರ್ವ ತಮಿಳುನಾಡು ಮೂಲದ ಲಾರಿ ಚಾಲಕ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.

ತಮಿಳುನಾಡು ಮೂಲದ ಲಾರಿ ಚಾಲಕ ಶವರಣ ನಾಪತ್ತೆ

ಹೌದು, ಶಿರೂರು ಬಳಿ ಆತನ ಟ್ಯಾಂಕರ್ ಗುಡ್ಡ ಕುಸಿತವಾದ ಪಕ್ಕದಲ್ಲೆ ಇತ್ತು. ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಟ್ಯಾಂಕರ್ ಲಾರಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ‘ಚಾಲಕ ಶರವಣ ನಾಪತ್ತೆ ಆದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಆಗಿರುವ ಶರವಣ ಅವರ ಮಾವ ಸೆಂದೀಲ್ ಎಂಬುವವರು ದೂರು ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಆತನ ಮೊಬೈಲ್​ ಬ್ಯಾಟರಿ ಕಡಿಮೆ ಆಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು. ಆದ್ರೆ, ಬಹಳ ದಿನ ಕಳೆದರೂ ಮೊಬೈಲ್ ಆನ್ ಆಗದಿದಕ್ಕೆ ಹುಡುಕಾಟ ನಡೆಸಿದ್ದೇವೆ ಎಂದರು. ಇದೀಗ ಲಾರಿ ಚಾಲಕರಿಂದ ಮಾಹಿತಿ ಸಿಗುತ್ತಿದ್ದಂತೆ ಶರವಣ ಸಂಬಂಧಿಕರು ಶಿರೂರುಗೆ ಬಂದಿದ್ದಾರೆ.

ನಾಲ್ವರಿಗಾಗಿ ಮುಂದುವರೆದ ಕಾರ್ಯಾಚರಣೆ

ಇನ್ನು ನಾಪತ್ತೆಯಾದ ನಾಲ್ವರ ಪತ್ತೆ ಆಗಬೇಕಿದ್ದು, ಕೇರಳ ಮೂಲದವರಾದ ಲಾರಿ ಚಾಲಕ ಅರ್ಜುನ್, ತಮಿಳುನಾಡು ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಚಾಲಕ ಶರವಣನ್, ಗಂಗೆಕೊಳ ಗ್ರಾಮದ ಯುವಕ ಜಗನ್ನಾಥ್ ಹಾಗೂ ಲೋಕೇಶ್ ನಾಯ್ಕ್ ಎಂಬುವವರಿಗಾಗಿ ಶೋಧ ಕಾರ್ಯ ನಡೆದಿದೆ.