ದಕ್ಷಿಣ ಕನ್ನಡ, ಜು.13: ಬಾಲ್ಯವಿವಾಹ ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ದುರದೃಷ್ಟಕರ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ(ಜು.13) ಮಂಗಳೂರಿನಲ್ಲಿ ಮಾತನಾಡಿದ ಅವರು, ‘ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂಬುದು ಜವಾಬ್ದಾರಿ ಸ್ಥಾನವಾದ ಮಹಿಳಾ ಮಂತ್ರಿಯಾಗಿ ಇದೊಂದು ತಲೆ ತಗ್ಗಿಸುವ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕುರಿತು ನಮ್ಮ ಇಲಾಖೆಯಿಂದ ಸಾಕಷ್ಟು ಕ್ರಮಗಳು ಆಗಿದೆ. ಇದಕ್ಕೆ ನಮ್ಮ ಒಂದು ಇಲಾಖೆಯು ಮಾತ್ರ ಲೋಪದೋಷವೆಂದು ಹೇಳಲು ಸಾಧ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯತ್, ಪ್ರೈಮರಿ ಶಾಲೆಯ ಎಸ್.ಡಿ.ಎಂ.ಸಿ, ಕಾನೂನು, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಹಕಾರ ಕೂಡ ಬೇಕಾಗುತ್ತದೆ. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದಾಗ ಈ ಬಾಲ್ಯ ವಿವಾಹ ತಡೆಗಟ್ಟಲು ಸಾದ್ಯವಿದೆ ಎಂದರು.
ರಾಜ್ಯದಲ್ಲಿ ಬೆಳಗಾವಿ ಎರಡನೇ ಜಿಲ್ಲೆ ಎಂದು ಹೇಳಲು ನಾಚಿಕೆ
ಇವತ್ತು ಬಳ್ಳಾರಿ ಪ್ರಥಮ ಸ್ಥಾನವಾಗಿದೆ, ಬೆಳಗಾವಿ ಎರಡನೇ ಜಿಲ್ಲೆಯಾಗಿದೆ. ಬೆಳಗಾವಿ ಎರಡನೇ ಜಿಲ್ಲೆಯಾಗಿದೆ ಎಂದು ಹೇಳಲು ನನಗೆ ಬಹಳಷ್ಟು ನಾಚಿಕೆ ಆಗುತ್ತದೆ. ಅದು ಮೂಡನಂಬಿಕೆಯಿಂದ ಮಾಡುತ್ತಾರೋ ಅಥವಾ ಏನಾದರೂ ಕಾರಣ ಇದೆಯಾ ಎಂಬುದೇ ಗೊತ್ತಾಗುತ್ತಿಲ್ಲ. ಈ ಕುರಿತು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಕಮೀಟಿ ಇದೆ. ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಹೀಗಾಗಿ ಕಟ್ಟು ನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಆಗುತ್ತದೆ. ನಮಗೆ ವಿಚಾರ ಗೊತ್ತಾದ ತಕ್ಷಣ ಎಫ್.ಐ.ಆರ್ ಮಾಡ್ತೇವೆ. ಆದ್ರೂ ಸಹ ಬಾಲ್ಯ ವಿಹಾಹ ಆಗುತ್ತಿದೆ. ಜೊತೆಗೆ ಬಾಲ್ಯದಲ್ಲೇ ಗರ್ಭಿಣಿಯರು ಆಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಬೇರು ಮಟ್ಟದಿಂದ ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೂ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.