ಕಾರವಾರ : ಮೈಸೂರು ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಂಡ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವರ ಬಂಧನವಾಗಿದೆ. ಮೈಸೂರಿನ ಮುಡಾದಲ್ಲಿ ಸಾವಿರಾರು ಕೋಟಿ ರೂ.ಗೂ ಹೆಚ್ಚು ದೊಡ್ಡ ಅವ್ಯವಹಾರ ನಡೆದಿದೆ. ಇದರ ವಿರುದ್ಧ ಬಿಜೆಪಿಯ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುವ ಮೂಲಕ ಕಾಂಗ್ರೆಸ್ ನೈತಿಕವಾಗಿ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ ಅಂಕೋಲಾ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಎರಡೂ ಹಗರಣದಲ್ಲಿ ಪ್ರಭಾವಿಗಳ ಪಾತ್ರ ಇದೆ. ಸೂಕ್ತ ತನಿಖೆಯಿಂದ ಹಗರಣದಲ್ಲಿ ಭಾಗಿಯಾದವರ ಮುಖವಾಡಗಳು ಕಳಚಬೇಕಾಗಿದೆ. ಬಡವರಾದ ದಲಿತರ ಅಭಿವೃದ್ಧಿಗಾಗಿ ಮೀಸಲಾಗಿಟ್ಟ ಹಣವನ್ನು ಕಾಂಗ್ರೆಸ್ ಮುಖಂಡರು ಕೊಳ್ಳೆಹೊಡೆದಿದ್ದಾರೆ. ಮೈಸೂರು ಮುಡಾದಲ್ಲಿ ನಡೆದ ಹಗರಣದಲ್ಲೂ ಕಾಂಗ್ರೆಸ್ ನ ಹಿರಿಯ ಮುಖಂಡರೂ ಶಾಮೀಲಾಗಿದ್ದಾರೆ.
ಕಾಂಗ್ರೆಸ್ ನ ಈ ಹಗರಣ, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದರೆ ಅದನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಮೇಲಾಗಿ ಲೂಟಿ ಮಾಡಿದ್ದರಲ್ಲಿ ಶಾಸಕರು, ಸಚಿವರ ಪಾತ್ರ ಇಲ್ಲ ಎನ್ನುವ ಮೂಲಕ ಸಮರ್ಥಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಇಲ್ಲ.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಾವುದೇ ದಾಖಲೆ ಇಲ್ಲದೆ ಭ್ರಷ್ಟಾಚಾರದ ಆರೋಪವನ್ನು ನಿರಂತರವಾಗಿ ಮಾಡಿದ ಕಾಂಗ್ರೆಸ್ ಇಂದು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ನೈತಿಕತೆಯನ್ನೇ ಕಳೆದುಕೊಂಡಿರುವುದು ವಿಪರ್ಯಾಸವಾಗಿದೆ. ಆಗ ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದ ಕಾಂಗ್ರೆಸ್ಸಿಗರು ಹಾಗೂ ಅವರ ಬೆಂಬಲಿಗರು ಈಗ ವಾಲ್ಮೀಕಿ ನಿಗಮದಲ್ಲಿನ ಹಗರಣ, ಮೈಸೂರು ಮುಡಾ ಹಗರಣದ ಬಗ್ಗೆ ತುಟಿಬಿಚ್ಚದೆ ಕುಳಿತುಕೊಂಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ರೂಪಾಲಿ ಎಸ್.ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.