ಅವೈಜ್ಞಾನಿಕ ಕಾಮಗಾರಿಯಿಂದ ಕುಮಟಾ-ಶಿರಸಿ ನಡುವೆ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ಅಪಾರ ನಷ್ಟ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತು ಅದರಿಂದುಟಾಗುವ ಅನಾಹುತಗಳು ಮುಂದುವರಿದಿವೆ. ಕುಮಟಾ ಮತ್ತು ಶಿರಸಿ ನಡುವೆ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಅಡಕೆ ಬೆಳೆಗಾರರು ಅಪಾರ ನಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಅಳಕೋಡ ಗ್ರಾಮದಿಂದ ಶಿರಸಿಗೆ ಹೋಗುವ ರಸ್ತೆಯಲ್ಲಿ ಕಾಮಗಾರಿ ಜಾರಿಯಲ್ಲಿರವುದರಿಂದ ಮೊನ್ನೆ ಇದೇ ಭಾಗದಲ್ಲಿ ಬಸ್ಸೊಂದು ಕೆಟ್ಟು ನಿಂತು ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ಬಸ್ಸಲ್ಲಿದ್ದ ಪ್ರಯಾಣಿಕರನ್ನು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಸ್ಥಳೀಯರೊಬ್ಬರು ಹೇಳುವ ಪ್ರಕಾರ ಗುಡ್ಡ ಪ್ರದೇಶದಿಂದ ಹರಿದು ಬರುವ ನೀರು ರಸ್ತೆಯನ್ನು ದಾಟಿ ಯಾಣದ ಚಂಡಿಕಾ ಹೊಳೆ ಸೇರುತಿತ್ತು. ಆದರೆ ರಸ್ತೆಯನ್ನು ಎತ್ತರಿಸುವ ದೃಷ್ಟಿಯಿಂದ 5-ಅಡಿ ಎತ್ತರದ ತಡೆಗೋಡೆ ಕಟ್ಟಿರುವುದರಿಂದ ನೀರು ಕೆಳಗೆ ಹರಿಯದೆ ಆ ಭಾಗದಲ್ಲಿರುವ ಅಡಕೆ ತೋಟಗಳಿಗೆ ನುಗ್ಗುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ರೈತರು ಮತ್ತು ಜನಸಾಮಾನ್ಯರಿಗೆ ಎದುರಾಗುತ್ತಿರುವ ಸಂಕಷ್ಟಗಳಿಗೆ ಹೊಣೆ ಯಾರು ಅಂತ ಸರ್ಕಾರ ಹೇಳಬೇಕು.