ನಿರಂತರ‌ ಮಳೆಗೆ ಮೈದುಂಬಿದ ‘ವರದಾ’

ಬನವಾಸಿ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ವರದಾ ಮೈ ತುಂಬಿ ಹರಿಯುತ್ತಿದ್ದಾಳೆ.

ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತಿ ಹೋಗಿದ್ದ ವರದಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮಳೆಗಾಲದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗೆ ಪ್ರವಾಹ ಸೃಷ್ಟಿಸುವ ವರದೆಯ ಒಡಲಿನಲ್ಲಿ 15 ಅಡಿಯಷ್ಟು ನೀರು ಹರಿಯುತ್ತಿದೆ. ವರದಾ ಮೂಲ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಸಿದ್ದಾಪುರ, ಸೊರಬ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿಯ ಒಳ ಹರಿವು ಹೆಚ್ಚಾಗತೊಡಗಿದೆ.

ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮೊಗವಳ್ಳಿ, ಹೊಸಕೇರಿ, ಭಾಶಿ, ನರೂರ, ಅಜ್ಜರಣಿ, ಮತ್ತುಗುಣಿ, ಎಡಗೊಪ್ಪ, ಮುತಾಳಕೊಪ್ಪ, ಯಡೂರಬೈಲ್ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ವರದಾ ನದಿಯ ಪ್ರವಾಹದಿಂದ ಸಾವಿರಾರು ಎಕರೆ ಕೃಷಿ ಭೂಮಿ ಮುಗುಳಗಡೆಯಾಗಲಿದೆ.

ವರದಾ ನದಿಯ ನೆರೆಯಿಂದ ಉಂಟಾಗುವ ತೊಂದರೆ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ತಯಾರಿ ನಡೆಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಪ್ರವಾಹ ಎದುರಿಸುವ ಗ್ರಾಮಗಳಿಗೆ ತೆರಳಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ಅನ್ನದಾತನಿಗೆ ವರವಾಗುವ ವರದೆ ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸಿ ರೈತರ ಕಣ್ಣಲ್ಲಿ ನೀರು ಭರಿಸುತ್ತಿದ್ದಾಳೆ.

ಬೇಸಿಗೆಯಲ್ಲಿ ಬರಿದಾಗಿದ್ದ ವರದಾ ನದಿಯು ನಿರಂತರ ಮಳೆಯಿಂದಾಗಿ ಮೈತುಂಬಿ ಹರಿಯುತ್ತ ಒಂದೆಡೆ ರೈತರ ಮೊಗದಲ್ಲಿ ನಗು ಮೂಡಿಸಿದರೆ. ಈಗೇ ನಿರಂತರ ಮಳೆಯಾದರೆ ಪ್ರವಾಹ ಉಂಟಾಗಿ ಸಾವಿರಾರು ಎಕರೆ ಕೃಷಿ ಭೂಮಿಯು ಜಲಾವೃತವಾಗಿ ರೈತರು ಸಂಕಷ್ಟಕ್ಕೆ ಈಡಾಗಲಿದ್ದಾರೆ.

ಮೊಗವಳ್ಳಿ ಹಾಗೂ ನೆರೆ ಉಂಟಾಗುವ ಗ್ರಾಮಗಳಿಗೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದೆವೆ. ವರದಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು. ಜನರ ರಕ್ಷಣೆಗೆ ಇಲಾಖೆ ಸನ್ನದ್ಧವಾಗಿದ್ದು ನಿರಂತರವಾಗಿ ನಿಗಾವಹಿಸಲಾಗಿದೆ.– ಅಣ್ಣಪ್ಪ ಮಡಿವಾಳ, ಉಪ ತಹಶೀಲ್ದಾರ ಬನವಾಸಿ