ಬೆಂಗಳೂರು, ಜುಲೈ 5: ಉತ್ತರ ಕನ್ನಡ, ಕರಾವಳಿ ಕರ್ನಾಟಕದ ಜಿಲ್ಲೆಗಳು ಹಾಗೂ ಮಲೆನಾಡು ವ್ಯಾಪ್ತಿಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಉಡುಪಿಯಲ್ಲಿ ಭಾರಿ ಮಳೆಗೆ ಮೊದಲ ಬಲಿಯಾಗಿದೆ. ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡ ಎಂಬಲ್ಲಿ ಗುಡ್ಡ ಕುಸಿದು ಹಳ್ಳಿ ಬೇರು ನಿವಾಸಿ ಅಂಬಾ ಎಂಬಾಕೆ ಮೃತಪಟ್ಟಿದ್ದಾರೆ. ಇತ್ತ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಗದ್ದೆಗೆ ಹೋಗುತ್ತಿದ್ದ ಮಹಿಳೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಬಳಿ ನದಿಗೆ ಮೀನು ಹಿಡಿಯಲು ಹೋದ ಮೈಕಲ್ ಎಂಬವರು ನೀರು ಪಾಲಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ 167 ಮಿಮೀ ಮಳೆ ಆಗಿದ್ದು, ನದಿಗಳೆಲ್ಲಾ ಭೋರ್ಗರೆಯುತ್ತಿವೆ. ಗಂಗಾವಳಿ ನದಿ ಅಬ್ಬರಕ್ಕೆ ಅಂಕೋಲ ತಾಲೂಕಿನ ಬಿಳೆಹೊಂಗಿ, ಮಂಜುಗುಣಿ, ಪಣಸಗೊಳಿ, ಹೊನ್ನೆಬೈಲು ಸೇರಿ 5ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ಸಂಕಷ್ಟ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಸುರಿದ ಮಳೆಗೆ ಓರ್ವ ಮಹಿಳೆ ಮತ್ತು ಜಾನುವಾರು ಸಾವನ್ನಪ್ಪಿವೆ. 92 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾಹಿತಿ ನೀಡಿದ್ದಾರೆ. ಕುಮಟಾ, ಭಟ್ಕಳ, ಹೊನ್ನಾವರ ತಾಲೂಕಿನ ಶಾಲಾ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡಕ್ಕೆ ಎನ್ಡಿಆರ್ಎಫ್ ಸಿಬ್ಬಂದಿ ರವಾನೆ
ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮವಾಗಿ ಎನ್ಡಿಆರ್ಎಫ್ ಸಿಬ್ಬಂದಿ ರವಾನಿಸಲಾಗಿದೆ. ಇಂದು ಕಾರವಾರ, ಕುಮಟಾ, ಅಂಕೋಲಾಗೆ ಬೆಂಗಳೂರಿನಿಂದ ತೆರಳಿದ ಎನ್ಡಿಆರ್ಎಫ್ ಸಿಬ್ಬಂದಿ ಭೇಟಿ ನೀಡಲಿದ್ದಾರೆ. 35 ಸಿಬ್ಬಂದಿಯ ಎರಡು ಎನ್ಡಿಆರ್ಎಫ್ ತಂಡ ಕಳುಹಿಸಿಕೊಡಲಾಗಿದೆ.
ಭಾರಿ ಮಳೆಯ ಕಾರಣ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಇಂಜಿನಿಯರಿಂಗ್ ಮುಂತಾದ ವಿದ್ಯಾರ್ಥಿಗಳಿಗೆ ರಜೆ ಇರುವುದಿಲ್ಲ ಅಂತಾ ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತೆ ರಶ್ಮಿ ಆದೇಶ ಹೊರಡಿಸಿದ್ದಾರೆ.
ಸುಂಟರಗಾಳಿ ಹೊಡೆತಕ್ಕೆ ನೆಲಕಚ್ಚಿದ ಅಡಕೆ ತೋಟ
ಉಡುಪಿಯ ರಟ್ಟಾಡಿಯಲ್ಲಿ ಭಾರಿ ಸುಂಟರಗಾಳಿ ಬೀಸಿ 40ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸುಂಟರಗಾಳಿ ಹೊಡೆತಕ್ಕೆ 5 ಸಾವಿರಕ್ಕೂ ಅಧಿಕ ಅಡಕೆ ಮರಗಳು, 2 ಸಾವಿರ ರಬ್ಬರ್ ಮರಗಳು ಕೂಡ ಸರ್ವನಾಶವಾಗಿವೆ.
ಇತ್ತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಯಕ್ಷಗಾನ ಕಲಾವಿದ ನಂದನ್ ಶೆಟ್ಟಿ ಎಂಬುವವರ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದಾಗ ಕುಟುಂಬದವರು ಹೊರಗೆ ಓಡಿ ಬಂದಿದ್ದಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.