T20 World Cup 2024: ಭಾರತದ ವಿಶ್ವಕಪ್ ಗೆಲುವಿನ ಹಿಂದಿದೆ ಕನ್ನಡಿಗ ‘ಕೈ’ ಕರಾಮತ್ತು

2022ರ ಟಿ20 ವಿಶ್ವಕಪ್​ನಲ್ಲಿ ಹ್ಯಾರಿಸ್ ರೌಫ್ ಎಸೆತದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸ್ಟ್ರೈಟ್ ಹಿಟ್​ ಸಿಕ್ಸ್​ ನಿಮಗೆ ನೆನಪಿರಬಹುದು. ಈ ಬಾರಿಯ ವಿಶ್ವಕಪ್​ನಲ್ಲಿ ಶಾಹೀನ್ ಅಫ್ರಿದಿಯ ಮೊದಲ ಓವರ್​ನಲ್ಲೇ ರೋಹಿತ್ ಶರ್ಮಾ ಫ್ಲಿಕ್ ಮಾಡಿ ಲೆಗ್ ಸೈಡ್​ನತ್ತ ಸಿಡಿಸಿದ ಸಿಕ್ಸ್ ದೃಶ್ಯ ಇನ್ನೂ ಕೂಡ ಹಚ್ಚ ಹಸಿರಾಗಿರಬಹುದು. ಈ ಎರಡು ಶಾಟ್​ಗಳನ್ನು ಇಲ್ಲಿ ಉದಾಹರಿಸಿದ್ದು ಒಬ್ಬರನ್ನು ಪರಿಚಯಿಸಲು ಅಷ್ಟೇ.

ಹೌದು, ಈ ಬಾರಿಯ ಟಿ20 ವಿಶ್ವಕಪ್​ ಪಂದ್ಯಗಳಲ್ಲಿ ವೇಗದ ಅಸ್ತ್ರಗಳನ್ನೇ ಭಾರತೀಯ ಬ್ಯಾಟರ್​ಗಳು ಲೀಲಾಜಾಲವಾಗಿ ಚೆಂಡಾಡಿದರು. ಅದರಲ್ಲೂ ಶಾಹೀನ್ ಹಾಗೂ ಮಿಚೆಲ್ ಸ್ಟಾರ್ಕ್​ ಎಸೆತಗಳಲ್ಲಿ ಹಿಟ್​ಮ್ಯಾನ್ ಬಾರಿಸಿದ ಫ್ಲಿಕ್ ಸಿಕ್ಸ್ ಸದ್ಯಕ್ಕಂತು ಮರೆಯಲು ಸಾಧ್ಯವಿಲ್ಲ. ಇನ್ನು ಪಾಂಡ್ಯ ಪವರ್, ಅಕ್ಷರ್ ಸಿಕ್ಸರ್ ಅಂತು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ್ದು ಸುಳ್ಳಲ್ಲ.

ಹೀಗೆ ಭಾರತೀಯ ಬ್ಯಾಟರ್​ಗಳು ವೇಗಿಗಳನ್ನು ಲೀಲಾಜಾಲವಾಗಿ ಎದುರಿಸಲು ಮುಖ್ಯ ಕಾರಣ ಕನ್ನಡಿಗ ಡಿ ರಾಘವೇಂದ್ರ. ಟೀಮ್ ಇಂಡಿಯಾ ಆಟಗಾರರಿಂದ ಪ್ರೀತಿಯಿಂದ ರಘು ಎಂದು ಕರೆಸಿಕೊಳ್ಳುವ ನಮ್ಮೂರ ಹುಡುಗ. ರಘು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಇದೀಗ ಟೀಮ್ ಇಂಡಿಯಾದ ಸೈಡ್ ಆರ್ಮ್ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಬ್ಯಾಟಿಂಗ್​ ಅಭ್ಯಾಸದ ವೇಳೆ ಅತ್ಯಂತ ವೇಗವಾಗಿ ಚೆಂಡೆಸೆಯುವ ಕೆಲಸ.

ಬಾಲ್ಯದಿಂದಲೂ ಕ್ರಿಕೆಟ್​ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಘವೇಂದ್ರ ಅವರು ಈ ಆಟಕ್ಕಾಗಿ ಏನನ್ನೂ ಬೇಕಾದರೂ ಸಮರ್ಪಿಸಲು ಸಿದ್ಧರಾಗಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯು ಅವರನ್ನು ಹಿಂದಕ್ಕೆ ಎಳೆಯುತ್ತಿತ್ತು. ಇದಾಗ್ಯೂ ಛಲ ಬಿಡದ ರಾಘವೇಂದ್ರ ಕ್ರಿಕೆಟ್ ಅನ್ನೇ ಸರ್ವಸ್ವವಾಗಿ ಆರಿಸಿಕೊಂಡಿದ್ದರು. ಪರಿಣಾಮ ಅದೆಷ್ಟೊ ದಿನಗಳು ಬಸ್ ನಿಲ್ದಾಣಗಳಲ್ಲಿ, ಹನುಮಾನ್ ದೇವಸ್ಥಾನದಲ್ಲಿ ಮತ್ತು ಹುಬ್ಬಳ್ಳಿಯ ಸ್ಮಶಾನದಲ್ಲಿ ಮಲಗಬೇಕಾಗಿ ಬಂತು. ಅಲ್ಲದೆ ನೀರು ಮತ್ತು ಬಾಳೆಹಣ್ಣಿನೊಂದಿಗೆ ಹಸಿವು ನೀಗಿಸಿಕೊಂಡಿದ್ದರು.

ಈ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತರೂ ಅವರು ಕ್ರಿಕೆಟಿಗನಾಗಲು ಸಾಧ್ಯವಾಗಲಿಲ್ಲ. ಆದರೆ ಪರಿಶ್ರಮಕ್ಕೆ ಫಲವಿದೆ ಎಂಬಂತೆ ಅವರ ವೇಗದ ಎಸೆತಗಳು ಕೊನೆಗೂ ಕೈ ಹಿಡಿಯಿತು. 2012 ರಲ್ಲಿ ಅವರು ಭಾರತ ತಂಡದ ಥ್ರೋ ಸ್ಪೆಷಲಿಸ್ಟ್ ಆಗಿ ಆಯ್ಕೆಯಾದರು.

ಹೀಗೆ ಒಮ್ಮೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಬಳಿಕ ಅವರು ಹಿಂತಿರುಗಿ ನೋಡಿಲ್ಲ. ಕಳೆದ 13 ವರ್ಷಗಳಿಂದ ಭಾರತೀಯ ಬ್ಯಾಟರ್​ಗಳ ಪ್ರದರ್ಶನಕ್ಕಾಗಿ ತಮ್ಮ ರಕ್ತವನ್ನೇ ಬೆವರಾಗಿ ಪರಿವರ್ತಿಸಿದ್ದಾರೆ. ಅಲ್ಲದೆ ತಲೆಯ ಎತ್ತರಕ್ಕೆ ಪುಟಿದೆಳುವಂತೆ ಚೆಂಡುಗಳನ್ನು ಥ್ರೋ ಮಾಡಿ ಟೀಮ್ ಇಂಡಿಯಾ ಬ್ಯಾಟರ್​ಗಳು ಲೀಲಾಜಾಲವಾಗಿ ಬ್ಯಾಟ್ ಬೀಸಲು ನೆರವಾಗಿದ್ದಾರೆ.

ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ತೆರೆಮರೆಯ ಕೊಡುಗೆ ನೀಡಿದ್ದಾರೆ. ಹೀಗೆ ಕೊಡುಗೆ ನೀಡುತ್ತಾ ಸಾಗಿದ ರಾಘವೇಂದ್ರ ಇದೀಗ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ರಾಘವೇಂದ್ರ ಕೈಯಲ್ಲಿ ಟಿ20 ವಿಶ್ವಕಪ್ ಇದೆ. ಜೊತೆಗೆ ತನ್ನ ತೋಳ್ಬಲದಲ್ಲಿ ವಿಶ್ವ ಗೆದ್ದ ಮಂದಹಾಸವಿದೆ.

ಸೈಡ್ ಆರ್ಮ್ ಥ್ರೋ ಯಾಕೆ ಕಷ್ಟ?- ಸಾಮಾನ್ಯವಾಗಿ ಚೆಂಡನ್ನು ಥ್ರೋ ಮಾಡುವುದರಲ್ಲಿ ಕಷ್ಟ ಏನಿದೆ ಎಂದು ನಿಮಗೂ ಅನಿಸಬಹುದು. ಆದರೆ ಈ ಕೆಲಸ ಅಂದುಕೊಂಡಷ್ಟು ಸುಲಭವಲ್ಲ. ಇಲ್ಲಿ ತಮ್ಮ ಥ್ರೋನಲ್ಲಿ ವ್ಯತ್ಯಾಸಗಳಾದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಒಂದೇ ಮಾದರಿಯಲ್ಲಿ ಥ್ರೋಗಳನ್ನು ಎಸೆಯುವ ಸಾಮರ್ಥ್ಯ ರೂಪಿಸಬೇಕು. ಉದಾಹರಣೆಗೆ ವಿರಾಟ್ ಕೊಹ್ಲಿಗೆ ಬೌನ್ಸರ್​ ಥ್ರೋಗಳನ್ನು ಎಸೆಯಬೇಕಾಗಿ ಬರಬಹುದು, ಮತ್ತೊಂದೆಡೆ ರೋಹಿತ್ ಶರ್ಮಾ ಯಾರ್ಕರ್​ ಥ್ರೋಗಳಿಗೆ ಡಿಮ್ಯಾಂಡ್ ಮಾಡಬಹುದು. ಇಲ್ಲಿ ಬ್ಯಾಟ್ಸ್​ಮನ್​ಗಳ ಆಗ್ರಹಕ್ಕೆ ಅನುಗುಣವಾಗಿ ಸತತವಾಗಿ ಚೆಂಡೆಸೆಯಬೇಕಾಗುತ್ತದೆ.

ಇಲ್ಲಿ ಓಡಿ ಬಂದು ಚೆಂಡೆಸೆಯುವ ಪರಿಪಾಠವೂ ಇಲ್ಲ. ಆದರೆ ಒಬ್ಬ ವೇಗದ ಬೌಲರ್ ಹೇಗೆ ಚೆಂಡೆಸೆಯುತ್ತಾರೋ ಅದನ್ನು ಮೀರಿಸುವಂತೆ ಥ್ರೋ ಮಾಡಬೇಕಾಗುತ್ತದೆ. ಇದಕ್ಕಾಗಿ ತೋಳ್ಬಲವನ್ನು ಹೆಚ್ಚಿಸಬೇಕು. ತೋಳ್ಬಲ ಹೆಚ್ಚಿಸಲು ಮತ್ತು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಗಂಟೆಗಳ ಕಾಲ ಜಿಮ್​ನಲ್ಲಿ ವ್ಯಾಯಾಮ ಮಾಡಬೇಕಾಗುತ್ತದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಬೌಲರ್​ಗಳ ತಂತ್ರ ಮತ್ತು ಅವರ ವೇಗದ ಮೇಲೆ ಕಣ್ಣಿಟ್ಟಿರಬೇಕು. ಅದಕ್ಕೆ ಪ್ರತಿ ತಂತ್ರ ರೂಪಿಸಿ ಟೀಮ್ ಇಂಡಿಯಾ ಬ್ಯಾಟರ್​ಗಳಿಗೆ ಥ್ರೋ ಎಸೆಯಬೇಕಾಗುತ್ತದೆ. ಹೀಗೆ ಎಸೆದ ಥ್ರೋಗಳಲ್ಲಿ ಪಳಗಿಯೇ ವಿರಾಟ್ ಕೊಹ್ಲಿ ಹ್ಯಾರಿಸ್ ರೌಫ್ ಅವರ ವೇಗದ ಎಸೆತಕ್ಕೆ ಲೀಲಾಜಾಲವಾಗಿ ಸಿಕ್ಸ್ ಸಿಡಿಸಿರುವುದು. ರೋಹಿತ್ ಶರ್ಮಾ ಶಾಹೀನ್ ಅಫ್ರಿದಿ ಎಸೆತದಲ್ಲಿ ಫ್ಲಿಕ್ ಸಿಕ್ಸ್​ ಬಾರಿಸಿರುವುದು.