ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ- ನೇತ್ರಾವತಿ ನದಿಯಲ್ಲಿ ಹೆಚ್ಚಿದ ನೀರು

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ಹೆಚ್ಚಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜೀವನದಿಗಳು ತುಂಬಿ ಹರಿಯುತ್ತಿದೆ.

ಪ್ರಮುಖ ಜೀವನದಿ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮಂಗಳೂರು ತಾಲೂಕಿನ ಪಾವೂರು ಅಣೆಕಟ್ಟು ಬಳಿ ನೇತ್ರಾವತಿ ನದಿಯ ಅಬ್ಬರ ಹೆಚ್ಚಾಗಿದೆ. ಸಮುದ್ರ ಸೇರಲು ರಭಸದಿಂದ ನದಿ ನೀರು ಹರಿಯುತ್ತಿದ್ದು, ಅಣೆಕಟ್ಟಿನ ಗೇಟ್ ಗಳನ್ನ ತೆರೆದು ಸಮುದ್ರಕ್ಕೆ ನೀರು ಬಿಡಲಾಗಿದೆ. ನದಿ ತೀರದ ಜನ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ನಿರ್ಮಣವಾಗಿದೆ. ಹಲವೆಡೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮತ್ತಷ್ಟು ಮಳೆಯಾಗೋ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.