ಮಂಡ್ಯದಲ್ಲಿ ಡೆಂಗ್ಯೂ ಹೆಚ್ಚಳ: ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ಕೇಸ್ ಪತ್ತೆ, ಫ್ರಿಡ್ಜ್​ಗಳಿಂದ ಅಪಾಯ

ಮಂಡ್ಯ, ಜೂನ್.29: ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಆರ್ಭಟ ಜೋರಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂಗೆ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದೆಡೆ ಸಕ್ಕರೆನಾಡು ಮಂಡ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 189 ಜನರಿಗೆ ಡೆಂಗ್ಯೂ ತಗುಲಿದೆ. ಡೆಂಗ್ಯೂ ಪ್ರಕರಣ ಏರಿಕೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಡೆಂಗ್ಯೂ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಫ್ರಿಡ್ಜ್ ಗಳು?

ಇನ್ನು ಮನೆಯ ಫ್ರಿಡ್ಜ್​ಗಳಿಂದ ಡೆಂಗ್ಯೂ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಫ್ರಿಡ್ಜ್​ಗಳು ಸೊಳ್ಳೆಗಳ ಸಂತಾನೋತ್ಪತಿ ತಾಣವಾಗುತ್ತಿವೆ. ಫ್ರಿಡ್ಜ್ ನಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳ ಲಾರ್ವ ಪತ್ತೆಯಾಗಿದೆ. ಸೊಳ್ಳೆ ಹೆಚ್ಚಳದಿಂದಲೇ ಮಾರಕ ಜ್ವರ ತೀವ್ರವಾಗಿ ಹರಡುತ್ತಿದೆ. ಪ್ರಿಡ್ಜ್ ಸ್ವಚ್ಚವಾಗಿ ಇಟ್ಟುಕೊಳ್ಳಲು ಆರೋಗ್ಯ ಇಲಾಖೆ ತಿಳಿಸಿದೆ.

ಬಿಳಿ ರಕ್ತಕಣಗಳು ಕುಸಿಯುವಂತೆ ಮಾಡುವ ಡೆಂಗ್ಯೂ ಜ್ವರದಿಂದ ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಹಾಗೂ 27 ವರ್ಷದ ಯುವಕ ಡೆಂಘೀಗೆ ಬಲಿಯಾಗಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಬರೋಬ್ಬರಿ 2457 ಡೆಂಘೀ ಪ್ರಕರಣ ದಾಖಲಾಗಿವೆ. ಇದನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ಡೆಂಗ್ಯೂ ಓಟಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಮನೆ ಮನೆ ಸರ್ವೇಗೆ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಲಕ್ಷ ಮನೆಗಳ ಸರ್ವೇಗೆ ಟಾಸ್ಕ್ ನೀಡಲಾಗಿದೆ. ಬಿಬಿಎಂಪಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪ್ರತಿ ಶುಕ್ರವಾರ ಮನೆಗಳಿಗೆ ಭೇಟಿ ನೀಡಿ, ಸೊಳ್ಳೆಗಳ ಲಾರ್ವಾ ಪತ್ತೆ ಹಚ್ಚುತ್ತಿದ್ದಾರೆ.. ಪಾಲಿಕೆ ಟೀಮ್​ನ ಜೊತೆ ನರ್ಸಿಂಗ್ ಸ್ಟೂಡೆಂಟ್ಸ್, ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ. ಮನೆಯ ಅಕ್ಕ-ಪಕ್ಕ ನೀರು ನಿಲ್ಲದಂತೆ ಜನರಲ್ಲಿ ಅರಿವು ಮೂಡಿಸ್ತಿದ್ದಾರೆ.

ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಘೀ ಹೆಚ್ಚಳ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ರು.