ಕೇಂದ್ರ ಹಾಗೂ ರಾಜ್ಯ ಸಚಿವರ ನಡುವೆ ಜಟಾಪಟಿ: ಮಂಡ್ಯದಲ್ಲಿ ನೂತನ ಸಕ್ಕರೆ ಕಾರ್ಖಾನೆಗೆ ವಿರೋಧ

ಮಂಡ್ಯ, ಜೂನ್.24: ಮಂಡ್ಯ ಜಿಲ್ಲೆಯ ರೈತರ ಜೀವನಾಡಿ, ರಾಜ್ಯದ ಏಕೈಕ ಸರ್ಕಾರಿ ಸಾಮ್ಯದ ಸಕ್ಕರೆ ಕಾರ್ಖಾನೆ ಅಂದರೆ ಅದು ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆ. ಸಾಕಷ್ಟು ವಿವಾದ, ನಷ್ಟ, ಭ್ರಷ್ಟಚಾರದಿಂದಾಗಿ ಸಾಕಷ್ಟು ಖ್ಯಾತಿಯನ್ನು ಕೂಡ ಪಡೆದಿದೆ. ಅಷ್ಟೇ ಅಲ್ಲದೆ ಮುಚ್ಚಿ ಹೋಗಿದ್ದ ಕಾರ್ಖಾನೆಗೆ ಸರ್ಕಾರ ಮರು ಜೀವ ತುಂಬಿದೆ. ಆರ್ಥಿಕ ಸಹಾಯ ನೀಡಿ, ಮತ್ತೆ ಕಾರ್ಖಾನೆ ಪುನಶ್ಛೇತನ ಮಾಡಲಾಗಿದೆ. 2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಕೂಡ ಸಜ್ಜಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರ ನೂತನ ಕಾರ್ಖಾನೆ ತೆರೆಯಲು ಕೂಡ ಮುಂದಾಗಿದೆ.

ಸುಮಾರು 500 ಕೋಟಿ ರೂ ವೆಚ್ಚದಲ್ಲಿ ಹೊಸ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ. ಬಜೆಟ್ ನಲ್ಲೂ ಕೂಡ ಘೋಷಣೆ ಮಾಡಲಾಗಿದೆ. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಂಡ್ಯದ ಸಂಸದರು, ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡ ವ್ಯಂಗವಾಡಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಗೆ ಮುಂದಾಗಿದ್ದಾರೆ. ಅದು ಸ್ಥಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.

ಅಂದಹಾಗೆ 1932ರಲ್ಲಿ ಸ್ಥಾಪನೆಯಾಗಿರೋ ಮೈ ಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹಳೆಯದಾಗಿದೆ. ಕಾರ್ಖಾನೆಯಲ್ಲಿ ಹಳೆಯದಾದ ಯಂತ್ರೋಪಕರಣಗಳು ಕೂಡ ಇವೆ. ಅಲ್ಲದೆ ಆಗಾಗ ಸಾಕಷ್ಟು ನಷ್ಟು ಕೂಡ ಉಂಟಾಗುತ್ತಿದೆ. ಹೀಗಾಗಿ ಸುಮಾರು 500 ರೂ ಕೋಟಿ ರೂ ವೆಚ್ಚದಲ್ಲಿ ಮಂಡ್ಯದ ಹೊರವಲಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆಗೂ ಕೂಡ ಸರ್ಕಾರ ಮುಂದಾಗಿತ್ತು. ಆದರೆ ಇದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರೇ ಕೇಂದ್ರದಿಂದ ಅನುದಾನ ತಂದು ಕಾರ್ಖಾನೆ ಸ್ಥಾಪನೆ ಮಾಡಲಿ. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಾರೆ ಮಂಡ್ಯದಲ್ಲಿ ನೂತನ ಸಕ್ಕರೆ ಕಾರ್ಖಾನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಸಾಕಷ್ಟು ವಿರೋಧಗಳು ಕೂಡ ಕೇಳಿ ಬರುತ್ತಿವೆ. ಹಾಗಾದ್ರೆ ಕಾರ್ಖಾನೆ ಸ್ಥಾಪನೆ ಆಗುತ್ತಾ ಇಲ್ವಾ ಕಾದು ನೋಡಬೇಕಿದೆ.