ಕೊಪ್ಪಳದ 415 ಶಾಲಾ ಕೊಠಡಿಗಳಿಗೆ ಬೇಕಿದೆ ದುರಸ್ತಿ ಭಾಗ್ಯ!

ಕೊಪ್ಪಳ, ಜೂನ್​ 24: ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಚಾವಣಿ ಈಗಲೋ, ಆಗಲೋ ಬೀಳುವಂತಿದೆ. ಇದು ಕೇವಲ ಜಂಗಮರ ಕಲ್ಗುಡಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಸ್ಥಿತಿಯಲ್ಲ ಕೊಪ್ಪಳ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಇದೆ.

ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳು ಇದೀಗ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಒಮ್ಮೆ ಮೇಲ್ಚಾವಣಿ, ಇನ್ನೊಮ್ಮೆ ಶಿಕ್ಷಕರನ್ನು ನೋಡಿಕೊಂಡು ಪಾಠ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಬೀಳುವ ಹಂತದಲ್ಲಿರುವ ಕೊಠಡಿಗಳಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಪಾಠದ ಮೇಲೆ ಗಮನ ಹರಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 415 ಸರ್ಕಾರಿ ಶಾಲೆಗಳ 810 ಕೊಠಡಿಗಳು ದುರಸ್ತಿಯಲ್ಲಿವೆ. ಈ ಕೊಠಡಿಗಳ ದುರಸ್ಥಿ ಕಾರ್ಯ ಮುಗಿಯದೇ ಇರುವುದರಿಂದ ದುರಸ್ತಿಯಲ್ಲಿರುವ ಕೊಠಡಿಗಳಲ್ಲಿಯೇ ಮಕ್ಕಳು ಪಾಠ ಕೇಳುತ್ತಿದ್ದಾರೆ.

ಬೇಸಿಗೆ ರಜೆಯಲ್ಲಿ ಕೊಠಡಿಗಳ ದುರಸ್ತಿ ಕಾರ್ಯವನ್ನು ಮಾಡಬೇಕು. ಆದರೆ, ಇದೀಗ ಶಾಲೆ ಆರಂಭವಾಗಿ ತಿಂಗಳು ಕಳೆದರು ಕೂಡ ದುರಸ್ತಿ ಕಾರ್ಯ ಮುಗಿದಿಲ್ಲ. ಜಿಲ್ಲೆಯಲ್ಲಿ ಅನೇಕ ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದೆ. ಎರಡು ವರ್ಷದ ಹಿಂದೆ ಆರಂಭವಾಗಿರುವ ಅನೇಕ ಕೊಠಡಿಗಳ ನಿರ್ಮಾಣ ಕಾರ್ಯ ಇನ್ನೂ ಮುಗಿದಿಲ್ಲ. ಇರುವ ಕೊಠಡಿಗಳು ದುರಸ್ತಿಯಲ್ಲಿರುವುದರಿಂದ ಜೀವ ಭಯದಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ.

ಈ ಬಗ್ಗೆ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಶ್ರಿಶೈಲ್ ಬಿರಾದಾರ್ ಮಾತನಾಡಿ, ಈಗಾಗಲೇ ದುರಸ್ತಿ ಕಾರ್ಯ ನಡೆದಿದೆ. ಆದಷ್ಟು ಬೇಗನೆ ದುರಸ್ತಿ ಕಾರ್ಯ ಮುಗಿಯುತ್ತದೆ ಎಂದು ಹೇಳಿದರು.

ಸದ್ಯ ಕೊಪ್ಪಳದ ಸರ್ಕಾರಿ ಶಾಲೆಗಳ ಮಕ್ಕಳು ಮತ್ತು ಸಿಬ್ಬಂದಿ ಆತಕಂದಲ್ಲಿಯೇ ಶಾಲೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ತೀರಾ ದುರಸ್ತಿಗೆ ಬಂದಿರುವ ಕೊಠಡಿಗಳನ್ನು ಕೆಡವಿ, ಹೊಸ ಕೊಠಡಿಗಳ ನಿರ್ಮಾಣ ಮಾಡಬೇಕು. ದುರಸ್ತಿ ಮಾಡಬಹುದಾದ ಕೊಠಡಿಗಳನ್ನು ಆದಷ್ಟು ಬೇಗನೆ ರಿಪೇರಿ ಮಾಡಿ, ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವ ಕೆಲಸ ಸರ್ಕಾರ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.