ಎಣ್ಣೆ ಹೊಡಿಯುವ ವಿಚಾರಕ್ಕಾಗಿ ನಡೆಯಿತು ಆಕಾಶ್​ ಮಠಪತಿ ಕೊಲೆ!

ಹುಬ್ಬಳ್ಳಿ, ಜೂನ್​ 24: ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ್ ಕೊಲೆ ಹಿಂದಿನ ಕಾರಣ ಬಹಿರಂಗಗೊಂಡಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ-ಹುಬ್ಬಳ್ಳಿ ಠಾಣೆ ಪೋಲಿಸರು ಎಂಟು ಜನರನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕೊಲೆಯಾದ ಆಕಾಶ್​ ಸ್ನೇಹಿತ ರಾಹುಲ್​​​ ಪೊಲೀಸರ ಮುಂದೆ ಕೊಲೆಗೆ ಮದ್ಯ ಶೇರಿಂಗ್​ನಿಂದ ಶುರುವಾದ ಗಲಾಟೆ ಕಾರಣ ಅಂತ ಹೇಳಿದ್ದಾನೆ.

ಕಳೆದ ಎರಡು ದಿನಗಳ ಹಿಂದೆ ಆಕಾಶ್ ಹಾಗೂ ಸ್ನೇಹಿತರು ಲೋಹಿಯಾ ‌ನಗರದ ಪವನ್ ಶಾಲೆಯ ಹಿಂಭಾಗ ಪಾರ್ಟಿ ಮಾಡುತಿದ್ದರು. ಮದ್ಯ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ. ಕೊಲೆಯಾದ ಆಕಾಶ್​ ಮಠಪತಿ ಮದ್ಯವನ್ನು ಜಾಸ್ತಿ ಹಾಕಿಕೊಂಡಿದ್ದಾರೆ. ನಿನಗೆ ಯಾಕೆ ಜಾಸ್ತಿ ಎಂದು ಕೇಳಿದಾಗ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಹುಲ್​ ಆಕಾಶ್​ನ ಕಪಾಳಕ್ಕೆ ಹೊಡೆದಿದ್ದಾನೆ. ಕೂಡಲೆ ಆಕಾಶ್​ ಕೆಳಗೆ ಬಿದ್ದಿದ್ದಾನೆ. ಕುಡಿಯುವ ವಿಚಾರಕ್ಕೆ ನಾನು ಹೊಡೆದಿದ್ದೇನೆ ಎಂದು ರಾಹುಲ್ ತಪ್ಪೊಪ್ಪಿಕೊಂಡಿದ್ದಾನೆ.

ಆಕಾಶ್ ಕೆಳಗೆ ಬಿದ್ದ ತಕ್ಷಣ ರಾಹುಲ್ ಅಲ್ಲಿಂದ ಓಡಿ ಹೋಗಿದ್ದಾನೆ. ಕುಡಿದ ಮತ್ತಿನಲ್ಲಿ ಆಕಾಶ್ ಮೃತಪಟ್ಟಿರುವ ಬಗ್ಗೆ ಸ್ನೇಹಿತರ ಗಮನಕ್ಕೆ ಬಂದಿರಲಿಲ್ಲ. ಅರ್ಜುನ್‌ ಮಳಗಿ, ಸಂಜು ಕೊಪ್ಪದ್, ರಾಹುಲ್ ಕಾಂಬ್ಳೆ, ವಿನಾಯಕ ತಾಳಿಕೊಟಿ, ಮನೋಜ್, ಚಮಕ್ ಅಲಿಯಾಸ್ ಮೌನೇಶ್, ಮಹೇಶ್ ಹಾಗೂ ಕಾರ್ತಿಕ ಬಂಧಿತರು. ಶೇಖರಯ್ಯ ಮಠಪತಿ ಆಕಾಶ್​​ ಪತ್ನಿ, ಅತ್ತೆ ಮತ್ತು ಮಾವನ ವಿರುದ್ಧವೂ ದೂರು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳೆದ 3 ತಿಂಗಳಲ್ಲಿ ಮೂರು ಕೊಲೆಗಳಾದವು. ಏಪ್ರಿಲ್​ ತಿಂಗಳಲ್ಲಿ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಕೊಲೆಯಾಗಿತ್ತು. ನಂತರ ಈ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮೇ ತಿಂಗಳಲ್ಲಿ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಕೊಲೆಯಾಗಿದೆ. ಈ ಎರಡೂ ಪ್ರಕರಣದಿಂದ ಬೆಚ್ಚಿ ಬಿದ್ದಿರುವ ಹುಬ್ಬಳ್ಳಿ ಜನತೆ ಮತ್ತೊಂದು ಕೊಲೆಯ ಸುದ್ದಿ ಕೇಳಿದ್ದಾರೆ. ಅದು, ಆಟೋ ಚಾಲಕರ ಪರವಾಗಿ ಸತತ ಹೋರಾಟ ಮಾಡುತ್ತ ಬಂದಿರುವ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಹಿರೇಮಠ ಪುತ್ರ ಆಕಾಶ್​ ಕೊಲೆ. ಸರಣಿ ಕೊಲೆಗಳಾಗಿದ್ದು, ಕಾನೂನು ಸುವ್ಯವಸ್ತೆ ಹದಗೆಟ್ಟಿದೆ ಎಂದು ಹುಬ್ಬಳ್ಳಿ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಮೃತ ಆಕಾಶ್​ನದ್ದು ಪ್ರೇಮ ವಿವಾಹ. ಆಕಾಶ್​ ಮತ್ತು ಪತ್ನಿ ಕಾವ್ಯ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವಾಸವಾಗಿದ್ದರು.