Bengaluru Rains: ಸಿಲಿಕಾನ್​ ಸಿಟಿಗೆ ದಿಢೀರ್ ಎಂಟ್ರಿ ಕೊಟ್ಟ ವರುಣ: ರಿಚ್​ಮಂಡ್​ ಟೌನ್​ ಸೇರಿ ಕೆಲವೆಡೆ ಮಳೆ

ಬೆಂಗಳೂರು, ಜೂನ್​ 19: ಕೆಲದಿನಗಳಿಂದ ಬಿಡುವು ನೀಡಿದ್ದ ಮಳೆರಾಯಇಂದು ಮತ್ತೆ ಅಬ್ಬರಿಸಿದೆ. ರಿಚ್​ಮಂಡ್​ ಟೌನ್​ ಸೇರಿದಂತೆ ಕೆಲವೆಡೆ ದಿಢೀರ್​ ಮಳೆ ಆಗಿದೆ. ಬೆಳಿಗ್ಗೆಯಿಂದ ಎಲ್ಲೆಡೆ ಬಿಸಿಲಿದ್ದು, ಇದೀಗ ಜೋರು ಮಳೆ ಸುರಿದಿದೆ. ಮಟ ಮಟ ಮಧ್ಯಾಹ್ನವೇ ದಿಢೀರ್ ಸುರಿದ ಮಳೆಗೆ ವಾಹನ ಸವಾರರು ಶಾಕ್​ ಆಗಿದ್ದು, ಪರದಾಡಿದ್ದಾರೆ. ಇನ್ನು ಸಂಜೆ ಕೂಡ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಏಪ್ರಿಲ್‌ನಲ್ಲಿ ತೀವ್ರ ಬಿಸಿಲಿನ ಬೇಗೆ ಎದುರಿಸುತ್ತಿದ್ದ ಬೆಂಗಳೂರಿನ ಜನರಿಗೆ ಮಾನ್ಸೂನ್​ ಪ್ರಾರಂಭದ ನಂತರ ಕೂಲ್​ ಕೂಲ್​ ವಾತಾವರಣ ಇತ್ತು. ಆದರೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಇದೀಗ ಬೆಂಗಳೂರಿನಲ್ಲಿ ಮಂಗಳವಾರದಿಂದ ಮಾನ್ಸೂನ್ ಮಳೆಯಲ್ಲಿ ಇಳಿಮುಖವಾಗಲಿದೆ ಎಂದು ತಿಳಿಸಿದೆ. ಆದರೆ, ಇದು ತಾಪಮಾನದಲ್ಲಿ ಏರಿಕೆಗೆ ಆಗಲಿ ಅಥವಾ ನಗರದಲ್ಲಿ ಶಾಖದ ಅಲೆ ಹೆಚ್ಚಳ ಕುರಿತಾಗಿ ಯಾವುದೇ ಸೂಚನೆಗಿಳಲ್ಲ.

ಇನ್ನು ಇತ್ತೀಚೆಗೆ ಜೂನ್ ಮೊದಲ ವಾರದಲ್ಲಿ ನಗರದಲ್ಲಿ ಸುರಿದಿದ್ದ ಭಾರೀ ಭಾರೀ ಮಳೆಯು 113 ವರ್ಷ ಹಳೆ ದಾಖಲೆಯನ್ನು ಮುರಿದಿತ್ತು. ಜೂನ್‌ನಲ್ಲಿ ಬೆಂಗಳೂರಿನಲ್ಲಿ ಸರಾಸರಿ 110.3 ಮಿಮೀ ಮಳೆ ಆಗಿದೆ. ಆದರೆ, ಈ ವರ್ಷ, ತಿಂಗಳ ಮೊದಲ ಎರಡು ದಿನಗಳಲ್ಲಿ, ಬೆಂಗಳೂರಿನಲ್ಲಿ 120 ಮಿಮೀ ಮಳೆ ದಾಖಲಾಗಿತ್ತು. ಇದಕ್ಕೂ ಮೊದಲು, ಜೂನ್ 16, 1891 ರಂದು ಬೆಂಗಳೂರಿನಲ್ಲಿ ಅತಿ ಹೆಚ್ಚು ಏಕದಿನ ಮಳೆ ದಾಖಲಾಗಿತ್ತು ಮತ್ತು ಜೂನ್ 2ರಂದು 111 ಮಿಮೀ ಮಳೆ ಆಗಿತ್ತು.

ಇತ್ತೀಚೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಬೆಳಗಾವಿ, ಧಾರವಾಡ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನಲೆ ಯಲ್ಲೋ ಅಲರ್ಟ್ ನೀಡಲಾಗಿತ್ತು. ಇನ್ನು ರಾಜ್ಯದಲ್ಲಿ ಮಳೆ ವಿಂಗಡಣೆಯಾಗಲಿದ್ದು, ಮಳೆ ವ್ಯಾಪಕತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದರು.