ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ: ಶಿವಮೊಗ್ಗ ಉತ್ತರ ಕನ್ನಡಕ್ಕೆ ಅಲರ್ಟ್.!

ಕಾರವಾರ/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಇಂದು ಒಂದು ಗೇಟ್ ತೆಗೆದು ನೀರನ್ನು ಸಾಂಪ್ರದಾಯಿಕವಾಗಿ ಹೊರಬಿಡಲಾಗಿದೆ.

ಲಿಂಗನಮಕ್ಕಿಯಲ್ಲಿ ಎಷ್ಟು ನೀರು.?

ಲಿಂಗನಮಕ್ಕಿ ಜಲಾಶಯಕ್ಕೆ ಸದ್ಯ 50 ಸಾವಿರ ಕ್ಯೂಸೆಕ್ ಗಿಂತಲೂ ಹೆಚ್ಚಿನ ನೀರು ಹರಿದುಬರುತ್ತಿದೆ.
ಜಲಾಶಯದ ಗರಿಷ್ಟ ಮಟ್ಟ 1819 ಅಡಿ ಇದ್ದು ಸದ್ಯ 1807.70 ಅಡಿಯಷ್ಟು ನೀರು ಭರ್ತಿಯಾಗಿದೆ. ನೀರಿನ ಮಟ್ಟ 1816 ಅಡಿ ತಲುಪಿದ ನಂತರ ನೀರನ್ನು ಹೊರಬಿಡಲಾಗುತ್ತದೆ.

ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಅಲರ್ಟ್.!

ಶರಾವತಿ ನದಿ ಪ್ರದೇಶದ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನದಿ ಪಾತ್ರದ ಜನರಿಗೆ ಎರಡುಬಾರಿ ಅಲರ್ಟ್ ನೀಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಜನರನ್ನು ಬೇರೆಡೆ ಸ್ಥಳಾಂತರಗೊಳ್ಳುವಂತೆ ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ಸಂಕಷ್ಟದ ಭೀತಿ.!

ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆಗಳಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗಕ್ಕೂ ಇದರ ಬಿಸಿ ತಟ್ಟಲಿದೆ. ಗೇರುಸೊಪ್ಪದ ಡ್ಯಾಮ್ ನಲ್ಲಿ ಸಹ ಇದೀಗ ನೀರು ಭರ್ತಿಯಾಗುತಿದ್ದು ಲಿಂಗನಮಕ್ಕಿಯಿಂದ ನೀರು ಹೊರಬಿಟ್ಟಲ್ಲಿ ಗೇರುಸೊಪ್ಪದ ಡ್ಯಾಮ್ ನಿಂದ ಐದು ಗೇಟ್ ಗಳನ್ನು ತೆರೆದು ಲಿಂಗನಮಕ್ಕಿ ಡ್ಯಾಮ್ ನಿಂದ ಬಿಡುಗಡೆಯಾದ ಪ್ರಮಾಣದಷ್ಟೇ ನೀರು ಹೊರಬಿಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆ.ಪಿ.ಸಿ ಅಧಿಕಾರಿಗಳು ಗೇರುಸೊಪ್ಪದ ಜಲಾಶಯ ಪ್ರದೇಶದ 18 ಗ್ರಾಮದ ವ್ಯಾಪ್ತಿಯ ಜನರಿಗೆ ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಗೇರುಸೊಪ್ಪ ಜಲಾಶಯದಿಂದ ಹತ್ತುಸಾವಿರ ಕ್ಯೂಸೆಕ್ ನೀರು ವಿದ್ಯುತ್ ಉತ್ಪಾದನೆಗೊಂಡು ಹೊರಹೋಗುತ್ತಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಲ್ಲಿ ಹೊನ್ನಾವರ ತಾಲೂಕಿನ ಗುಂಡಬಾಳ, ನಗರಬಸ್ತಿಕೆರೆ, ಸಂಶಿ, ಕುದ್ರಗಿ, ಇಡಗುಂಜಿ, ಮೇಲಿನ ಇಡಗುಂಜಿ, ಕೆಳಗಿನ ಇಡಗುಂಜಿ ಸೇರಿದಂತೆ ಹದಿನೆಂಟು ಗ್ರಾಮಗಳಿಗೂ ಹೆಚ್ಚು ಪ್ರದೇಶದಲ್ಲಿ ನೆರೆ ಆವರಿಸಲಿದ್ದು ಕೃಷಿ ಭೂಮಿ, ಅಡಿಕೆ ತೋಟಗಳು, ವಾಸ್ತವ್ಯದ ಮನೆಗಳು ಜಲಾವೃತವಾಗುವ ಸಾಧ್ಯತೆಗಳಿವೆ. ಇದರಿಂದ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಪ್ರವಾಹದಿಂದ ತೊಂದರೆಯಾಗಲಿದೆ.

ಶಿವಮೊಗ್ಗದಲ್ಲಿ ದಾಖಲೆ ಬರೆದ ಮಳೆ.!

ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ವ್ಯಾಪಕ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಜಿಲ್ಲೆಯಾಧ್ಯಾಂತ yellow alert ನೀಡಲಾಗಿದೆ. ಇನ್ನು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾದ “ಟಾಪ್ 3” ಪ್ರದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಂಡಿಗೆ (ANDEGE) 129mm, ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊನ್ನೇತಾಳು (HONNETHALU) ವಿನಲ್ಲಿ 126.5 mm ಮಳೆ ಸುರಿದಿದೆ.