ಬೆಂಗಳೂರು, ಜೂ.02: ಕೆಲವು ದಿನಗಳಿಂದ ಶಾಂತವಾಗಿದ್ದ ವರುಣ, ಜೂನ್ ತಿಂಗಳ ಮೊದಲ ದಿನದಿಂದಲೇ ಬೆಂಗಳೂರಿಗೆ ಆಗಮಿಸಿದ್ದಾನೆ. ನಗರದ ಹಲವೆಡೆ ಗಾಳಿ ಸಹಿತ ಮಳೆ ಶುರುವಾಗಿದ್ದು, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್ಹಾಲ್, ಕೆ.ಆರ್.ಮಾರ್ಕೆಟ್ , ಕಾರ್ಪೊರೇಷನ್, ಶಿವಾಜಿನಗರ, ಯಲಹಂಕ ಸುತ್ತಮುತ್ತ ಭರ್ಜರಿ ಮಳೆ ಬಿಳುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇತ್ತ ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ.
ನಿನ್ನೆ (ಜೂ.01)ರಿಂದ ಐದು ದಿನ ನಗರದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್ ಹೇಳಿದ್ದರು. ಈಗಾಗಲೇ ನಿರೀಕ್ಷೆಗೂ ಮೊದಲೇ ಭಾರತದ ದಕ್ಷಿಣ ರಾಜ್ಯವಾದ ಕೇರಳವನ್ನು ನೈಋತ್ಯ ಮಾನ್ಸೂನ್ ಪ್ರವೇಶ ಮಾಡಿದ್ದು, ಇವತ್ತು ಕರ್ನಾಟಕ ಗಡಿಗೆ ನೈಋತ್ಯ ಮಾನ್ಸೂನ್ ಪ್ರವೇಶ ಎಂಟ್ರಿ ಕೊಟ್ಟಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಮಾನ್ಸೂನ್ ಪ್ರವೇಶವಾಗಿದೆ.
ಹೀಗಾಗಿ ಇವತ್ತಿನಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಇಂದಿನಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಭಾರೀ ಮಳೆ ಸಾಧ್ಯತೆ ಇದ್ದು, ನೈಋತ್ಯ ಮಾನ್ಸೂನ್ ಹಿನ್ನೆಲೆ ಇವತ್ತು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಕೊಪ್ಪಳ ಮಂಡ್ಯ, ಮೈಸೂರು ಸೇರಿದಂತೆ ಗುಡುಗು ಸಹಿತ ಭಾರೀ ಮಳೆ ಮೂನ್ಸುಚನೆ ನೀಡಲಾಗಿತ್ತು. 40-50 ಕಿಮೀ ವೇಗದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ ಎಂದು ಮೊದಲೇ ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ನಗರದಲ್ಲಿ ಇನ್ನೂ 4ದಿನ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.