ಜೂನ್‌ 3ರಂದು ವಿಧಾನ ಪರಿಷತ್ ಚುನಾವಣೆ: ಪದವೀಧರ ಮತದಾರರು ಮತ್ತು ಶಿಕ್ಷಕರಿಗೆ ವಿಶೇಷ ರಜೆ

ಬೆಂಗಳೂರು, ಮೇ 29: ಲೋಕಸಭಾ ಚುನಾವಣೆ ಏನೋ ಮುಗಿದಿದೆ. ಫಲಿತಾಂಶ ಅಷ್ಟೇ ಹೊರಬೀಳಬೇಕಿದೆ. ಈ ಹೊತ್ತಿನಲ್ಲೇ ರಾಜಕೀಯ ನಾಯಕರಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ವಿಧಾನಪರಿಷತ್​ ಚುನಾವಣಾ ಕಾವು ರಂಗೇರಿದೆ. ಈ ಮಧ್ಯೆ ಜೂನ್‌ 3ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಪದವೀಧರ ಮತದಾರರು ಮತ್ತು ಶಿಕ್ಷಕರಿಗೆ ವಿಶೇಷ ರಜೆ ನೀಡಿ ರಾಜ್ಯ ಸರ್ಕಾರದಿಂದ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ.

ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಜೂ.3ಕ್ಕೆ ಚುನಾವಣೆ ನಿಗದಿಯಾಗಿದೆ. ಇತ್ತ ವಿಧಾನ ಪರಿಷತ್ ಚುನಾವಣೆ ಗೆಲ್ಲೋಕೆ ದೋಸ್ತಿ ನಾಯಕರು ಮೊದಲ ಸಮನ್ವಯ ಸಭೆ ನಡೆಸಿದ್ರು. ಸಭೆಯಲ್ಲಿ ಜೂನ್ 3ರಂದು ನಡೆಯೋ ಶಿಕ್ಷಕ, ಮತ್ತು ಪದವೀಧರ ಕ್ಷೇತ್ರಗಳನ್ನ ಗೆಲ್ಲೋಕೆ ರಣತಂತ್ರ ರೂಪಿಸಲಾಗಿದೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್​.ಅಶೋಕ್​, ಶಾಸಕ ಅಶ್ವತ್ಥ್​ ನಾರಾಯಣ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ವಾಗ್ದಾನ ಮಾಡೋದ್ರ ಜೊತೆಗೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿತ್ತು.

ಈ ಬಾರಿಯ ಚುನಾವಣೆಯಲ್ಲೂ ಕೂಡ ಜೆಡಿಎಸ್, ಬಿಜೆಪಿಯ ಮೈತ್ರಿ ಮುಂದುವರೆದಿದೆ. ಆದ್ರೆ ದಕ್ಷಿಣ ಶಿಕ್ಷಕ ಕ್ಷೇತ್ರದಿಂದ ಕಣಕ್ಕೆ ಇಳಿಯೋ ಮೈತ್ರಿ ಅಭ್ಯರ್ಥಿ ಯಾರು ಅನ್ನೋ ಗೊಂದಲ ಮುಂದುವರೆದಿದೆ. ಬಿಜೆಪಿ ಹೈಕಮಾಂಡ್ ಈಗಾಗಲೇ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಡಾ ಈ.ಸಿ.‌ನಿಂಗರಾಜೇಗೌಡಗೆ ಟಿಕೆಟ್ ಘೋಷಿಸಿದೆ. ಆದರೆ ಜೆಡಿಎಸ್ ನಾಯಕರು ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಪಕ್ಷದಿಂದ ವಿವೇಕನಂದಾಗೆ ಬಿ ಫಾರಂ ನೀಡಲಾಗಿತ್ತು.