ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಸರ್ಕಾರಿ ಕ್ವಾಟ್ರಸ್ ನಲ್ಲಿ ಹೆಣ್ಣು ಭ್ರೂಣ ಹತ್ಯೆ (Female Foeticide) ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನರ್ಸ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳು 25-30 ಸಾವಿರಕ್ಕೆ ಹೆಣ್ಣು ಭ್ರೂಣ ಹತ್ಯೆ ಮಾಡ್ತಿದ್ದರು. ಗರ್ಭಿಣಿಯರನ್ನು ಟಾರ್ಗೆಟ್ ಮಾಡಿ ಅವರಿಗೆ ಹೆಣ್ಣು ಮಗು ಬಗ್ಗೆ ನಿರಾಸಕ್ತಿಯಿದ್ರೆ ಭ್ರೂಣ ಹತ್ಯೆ ಮಾಡ್ತಿದ್ದರು ಎಂದು ವಿಚಾರಣೆ ವೇಳೆ ಕರಾಳ ದಂಧೆಯ ಬಗ್ಗೆ ಬಂಧಿತ ನರ್ಸ್ ಬಾಯ್ಬಿಟ್ಟಿದ್ದಾರೆ.
ಸ್ಕಾನಿಂಗ್ ಸೆಂಟರ್ಗಳಿಗೆ ಬರುವ ಗರ್ಭಿಣಿಯರನ್ನು ಟಾರ್ಗೆಟ್ ಮಾಡಿ ಎರಡನೇ ಮಗುವಿನ ಸ್ಕ್ಯಾನಿಂಗ್ಗೆ ಬಂದಿದ್ದಾರೆ ಎಂದರೆ ಗಾಳ ಹಾಕುತ್ತಿದ್ದರು. ಹೆಣ್ಣು ಮಗು ಬಗ್ಗೆ ನಿರಾಸಕ್ತಿ ತೋರಿಸಿದ್ರೆ ಭ್ರೂಣ ಲಿಂಗ ಪರೀಕ್ಷೆ ಮಾಹಿತಿ ನೀಡುತ್ತಿದ್ದರು. ಒಪ್ಪಿಕೊಂಡ್ರೆ ಒಂಟಿ ಮನೆಯಲ್ಲಿ ಸ್ಕ್ಯಾನಿಂಗ್ ನಡೆಸಿ ಹೆಣ್ಣು ಭ್ರೂಣ ಎಂದು ಖಚಿತವಾದ್ರೆ ಪಾಂಡವಪುರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಿ ಬಳಿಕ ಸರ್ಕಾರಿ ಹೆಲ್ತ್ ಕ್ವಾರ್ಟರ್ಸಿನಲ್ಲಿ ಅಬಾರ್ಷನ್ ಮಾಡುತ್ತಿದ್ದರು ಎಂದು ನರ್ಸ್ ಮಾಹಿತಿ ಕಕ್ಕಿದ್ದಾರೆ.
ಪ್ರಕರಣ ಸಂಬಂಧ ಇದುವರೆಗೆ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಮತ್ತಿಬ್ಬರು ಕಿಂಗ್ ಪಿನ್ಗಳಿಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ. ಕೇವಲ ಎರಡೇ ತಿಂಗಳಲ್ಲಿ 15ಕ್ಕೂ ಹೆಚ್ಚು ಭ್ರೂಣ ಹತ್ಯೆ ನಡೆದಿದೆ. ಸ್ಕ್ಯಾನಿಂಗ್ಗೆ 15 ಸಾವಿರ, ಭ್ರೂಣಹತ್ಯೆಗೆ 15ರಿಂದ 20 ಸಾವಿರ ನಿಗದಿ ಮಾಡಿ ಈ ಕರಾಳ ದಂಧೆ ನಡೆಸಲಾಗುತ್ತಿತ್ತು. ದಂಧೆಯಲ್ಲಿ ಕೆಲ ಖಾಸಗಿ ಕ್ಲಿನಿಕ್ಗಳ ನರ್ಸ್ಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಕರಣದ ಸಂಬಂಧ ಪಾಂಡವಪುರ ಎಸಿಯಿಂದಲೂ ಕೋರ್ಟ್ ಗೆ ದೂರು ದಾಖಲಾಗಿದೆ. ಪಾಂಡವಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.